ದಾವಣಗೆರೆ: ಇತ್ತೀಚೆಗೆ ದಾವಣಗೆರೆ ಕ್ರೈಂ ವಿಭಾಗಕ್ಕೆ ಸೇರ್ಪಡೆಯಾಗಿರುವ ಒಂಭತ್ತು ತಿಂಗಳ ಪೊಲೀಸ್ ಶ್ವಾನ ತಾರ ಅದಾಗಲೇ ಜಿಲ್ಲೆಯಲ್ಲಿ ಭಾರಿ ಫೇಮಸ್ ಆಗಿದೆ. ಬೆಂಗಳೂರಿನಲ್ಲಿ ತರಬೇತಿ ಪಡೆದು ದಾವಣಗೆರೆ ಜಿಲ್ಲೆ ಕ್ರೈಂ ಬ್ರ್ಯಾಂಚ್ ಗೆ ಈ ಶ್ವಾನ ಸೇರ್ಪಡೆಯಾಗಿದೆ.
ಅದಾಗಲೇ ತನ್ನ ಸಾಧನೆ ಮೆರೆಯುತ್ತಿರುವ ಶ್ವಾನ ತಾರಾ, ಇದೀಗ ಕೊಲೆ ಆರೋಪಿಯೋರ್ವನನ್ನು ಹಿಡಿದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಬೆಲ್ಜಿಯಂ ಮೆಲೋನಿಸ್ ಎಂಬ ವಿಶಿಷ್ಟ ತಳಿಯ ಈ ಶ್ವಾನದ ಮಹತ್ವದ ಸಾಧನೆ ಕಂಡು ಎಲ್ಲರೂ ಬೆರಗಾಗಿದ್ದಾರೆ.
ಪೊಲೀಸ್ ಕ್ರೈಂ ವಿಭಾಗದಲ್ಲಿ ಇಂತಹ ವಿಶಿಷ್ಟ ತಳಿಯಿರುವ ಏಕೈಕ ಪೊಲೀಸ್ ಶ್ವಾನ ಇದಾಗಿದೆ. ತಾರಾ ಈವರೆಗೆ 14 ಪ್ರಕರಣಗಳ ಪತ್ತೆ ಹಚ್ಚಿದೆ. ನಾಲ್ಕು ಪ್ರಕರಣಗಳ ಬಗ್ಗೆ ವಿಶೇಷವಾದ ಸುಳಿವು ನೀಡಿದೆ. ಅಲ್ಲದೇ ಓರ್ವ ಕೊಲೆ ಆರೋಪಿಯನ್ನು 8 ಕಿ.ಮೀ ವರೆಗೆ ಓಡಿ ಹೋಗಿ ಹಿಡಿಯುವ ಮೂಲಕ ಇದೀಗ ತಾರಾ ಶ್ವಾನದ ಹೆಸರು ರಾಜ್ಯಾದ್ಯಂತ ಕೇಳಿಬರುತ್ತಿದೆ.
ದಾವಣಗೆರೆಯ ಮಲ್ಲೇಶಟ್ಟಿಹಳ್ಳಿಯಲ್ಲಿಯ ಕ್ರಾಸ್ ಬಳಿ 26 ವರ್ಷದ ನರಸಿಂಹ ಎಂಬ ಯುವಕನ ಕೊಲೆಯಾಗಿತ್ತು. ಕೊಲೆ ಆರೋಪಿ ಪತ್ತೆಗೆ ಪೊಲೀಸ್ ಶ್ವಾನ ತಾರಾ ಮುಂದಾಗಿದ್ದು, ಘಟನಾ ಸ್ಥಳದಿಂದ ನೇರವಾಗಿ ಓಡಿ ಬಂದ ಶ್ವಾನ ದಾವಣಗೆರೆ ನಗರದ ರಾಮನಗರ ಆಂಜನೇಯ ದೇವಸ್ಥಾನದ ಬಳಿಯ ಮನೆ ಎದುರು ನಿಂತಿದೆ. ಅದು ಕೊಲೆ ಆರೋಪಿ ಶಿವಯೋಗೇಶ್ ಅಲಿಯಾಸ್ ಯೋಗಿ ಮನೆ. ಪರಿಶೀಲನೆ ನಡೆಸಿದ ಪೊಲೀಸರು ಇದೀಗ ಆರೋಪಿಯನ್ನು ಬಂಧಿಸಿದ್ದಾರೆ. ಪೊಲೀಸ್ ಶ್ವಾನ ತಾರಾ ಸುಲಭವಾಗಿ ಕೊಲೆ ಆರೋಪಿಯನ್ನು ಪತ್ತೆ ಮಾಡಿ ಜೈಲಿಗಟ್ಟುವಲ್ಲಿ ಯಶಸ್ವಿಯಾಗಿದೆ.