
ಬೆಳಗಾವಿ: ಪೊಲೀಸ್ ಇಲಾಖೆಯಲ್ಲಿ 1700ಕ್ಕೂ ಹೆಚ್ಚು ವಾಹನಗಳನ್ನು ನಿರುಪಯುಕ್ತಗೊಳಿಸಲು ತೀರ್ಮಾನಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಹಂತಹಂತವಾಗಿ 1700 ವಾಹನಗಳನ್ನು ನಿರುಪಯುಕ್ತಗೊಳಿಸಲಾಗುವುದು. 100ಕೋಟಿ ರೂ.ವೆಚ್ಚದಲ್ಲಿ ಹೊಸ ವಾಹನಗಳನ್ನು ಖರೀದಿಸಲು ತೀರ್ಮಾನಿಸಲಾಗಿದೆ ಎಂದು ಸಚಿವರು ತಿಳಿಸಿದರು.
ವಿಧಾನಸಭೆಯಲ್ಲಿ ಸದಸ್ಯ ಶ್ರೀನಿವಾಸ ಜಿ.ಎಚ್ ಅವರ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವರು, ಅಗ್ನಿಶಾಮಕ ಠಾಣೆ ಮತ್ತು ತುರ್ತು ಸೇವಾ ಇಲಾಖೆಯಲ್ಲಿ 15 ವರ್ಷಗಳ ಹಳೆಯ ವಾಹನಗಳನ್ನು ಅನುಪಯುಕ್ತಗೊಳಿಸುವ ಹಾಗೂ ಬದಲಿಗೆ ಹೊಸ ವಾಹನಗಳನ್ನು ಖರೀದಿಸಲು ಅನುಮತಿ ನೀಡುವ ಬಗ್ಗೆ ಸರಕಾರದ ಪ್ರಧಾನ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗಿದೆ. ಸಭೆಯಲ್ಲಿ ಅವಧಿ ಮೀರಿದ ಮತ್ತು ಸುಸ್ಥಿತಿಯಲ್ಲಿರುವ ವಾಹನಗಳನ್ನು ನಿರುಪಯುಕ್ತಗೊಳಿಸಿದಲ್ಲಿ ಇಲಾಖೆಯ ಮೂಲ ಚಟುವಟಿಕೆಗಳಿಗೆ ತೊಂದರೆಯಾಗುವುದರಿಂದ ವಾಹನಗಳ ನೋಂದಣಿ ಪತ್ರವನ್ನು ನವೀಕರಿಸಲು ಕೇಂದ್ರ ಸರಕಾರದ ಅನುಮತಿ ಪಡೆಯಲು ನಿರ್ಣಯ ಕೈಗೊಳ್ಳಲಾಗಿದೆ. ಈ ಕುರಿತು ಕೇಂದ್ರ ಸರಕಾರಕ್ಕೆ ಪತ್ರ ಬರೆಯಲಾಗಿದ್ದು, ಅನುಮತಿಗಾಗಿ ಕಾಯುತ್ತಿರುವುದಾಗಿ ವಿವರಿಸಿದರು.