ತುಮಕೂರು: ಕ್ರಿಮಿನಲ್ ಗಳಿಗೆ ಪೊಲೀಸ್ ಇಲಾಖೆಯ ಮಾಹಿತಿ ರವಾನಿಸುತ್ತಿದ್ದ ಐವರು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.
ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ವಿ. ಅಶೋಕ್ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಕ್ಯಾತ್ಸಂದ್ರ ಪೋಲಿಸ್ ಠಾಣೆಯ ಮಂಜು, ಅಹೋಬಲ ನರಸಿಂಹಮೂರ್ತಿ, ಜಯನಗರ ಠಾಣೆಯ ಮನು ಎಸ್. ಗೌಡ, ಸಂಚಾರ ಪೊಲೀಸ್ ಠಾಣೆಯ ರಾಮಕೃಷ್ಣ, ಎಸ್.ಪಿ. ಕಚೇರಿ ಸಿಬ್ಬಂದಿ ಸುರೇಶ್ ಅಮಾನತುಗೊಂಡವರು.
ಇವರು ಕ್ರಿಮಿನಲ್ ಗಳಾದ ಮಂಜುನಾಥ ರೆಡ್ಡಿ, ನವೀನ, ನರಸಿಂಹಮೂರ್ತಿ ಎಂಬುವರಿಗೆ ಪೊಲೀಸ್ ಇಲಾಖೆಯ ಮಾಹಿತಿ ಸೋರಿಕೆ ಮಾಡಿದ್ದಾರೆ. ದಂಡಿನಶಿವರ ಮತ್ತು ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಮೂವರು ಆರೋಪಿಗಳ ವಿರುದ್ಧ ಕೊಲೆಗೆ ಸಂಚು, ಹಲ್ಲೆ ಆರೋಪ ಕೇಸ್ ದಾಖಲಾಗಿದ್ದು, ವಾಟ್ಸಾಪ್ ಮೂಲಕ ಪೊಲೀಸರೇ ಆರೋಪಿಗಳಿಗೆ ಮಾಹಿತಿ ರವಾನಿಸಿದ್ದರು. ಮಂಜುನಾಥ ರೆಡ್ಡಿ ಮೊಬೈಲ್ ವಶಕ್ಕೆ ಪಡೆದು ಪರಿಶೀಲನೆ ನಡೆಸಿದಾಗ ಪೊಲೀಸ್ ಇಲಾಖೆಯ ಮಾಹಿತಿ ಸೋರಿಕೆಯಾಗಿರುವುದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಐವರು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ ಎಂದು ಹೇಳಲಾಗಿದೆ.