ದೂರು ದಾಖಲಾದ ಕೆಲ ಗಂಟೆಗಳಲ್ಲೆ ಆರೋಪಿಗಳನ್ನ ಹಿಡಿಯುವುದು ಯಾವುದೇ ಪೊಲೀಸರಿಗು, ದೊಡ್ಡ ಸಾಧನೆಯೆ ಸರಿ. ಈಗ ಹೈದರಾಬಾದ್ ಪೊಲೀಸರು ಈ ಸಾಧನೆ ಮಾಡಿದ್ದಾರೆ. ದೂರು ವರದಿಯಾದ ನಾಲ್ಕು ಗಂಟೆಗಳಲ್ಲೆ ದರೋಡೆ ಪ್ರಕರಣವನ್ನು ಭೇದಿಸಿದ್ದಾರೆ.
ಬಾಲಾಪುರದಲ್ಲಿರುವ ನಿವೃತ್ತ ನೌಕರನ ಮನೆಗೆ ನುಗ್ಗಿದ ದುಷ್ಕರ್ಮಿಯೊಬ್ಬ ನಗದು, ಚಿನ್ನಾಭರಣ, ಬೆಳ್ಳಿ ಆಭರಣಗಳನ್ನ ಕದ್ದು ಪರಾರಿಯಾಗಿದ್ದಾನೆ ಎಂದು ಕೆ. ರತ್ನಾಕರ್ ರಾವ್ ಎನ್ನುವವರು ಮೀರ್ಪೇಟೆ ಪೊಲೀಸರಿಗೆ ದೂರು ನೀಡಿದ್ದರು.
ದರೋಡೆಯ ಬಗ್ಗೆ ಮಾಹಿತಿ ಲಭಿಸಿದ ತಕ್ಷಣ, ಮೀರ್ಪೇಟೆ ಪೊಲೀಸರು, ರಾಚಕೊಂಡ ಸೆಂಟ್ರಲ್ ಕ್ರೈಮ್ ಠಾಣೆ ಪೊಲೀಸ್ ಅಧಿಕಾರಿಗಳೊಂದಿಗೆ ಜಂಟಿ ತನಿಖೆ ನಡೆಸಿ ಆರೋಪಿಯನ್ನ ನಾಲ್ಕೇ ಗಂಟೆಗಳಲ್ಲಿ ಪತ್ತೆ ಹಚ್ಚಿ ಬಂಧಿಸಿದ್ದಾರೆ. ಬಂಧಿತನಿಂದ 13.10 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳು ಸೇರಿದಂತೆ ಇತರ ಬೆಲೆ ಬಾಳುವ ವಸ್ತುಗಳನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.
27 ವರ್ಷದ ಕೆ. ಸುಧಾಕರ್ ಬಂಧಿತ ಆರೋಪಿ. ಈತ ಈ ಹಿಂದೆಯು ಕೊಲೆ, ಕಳ್ಳತನ, ದರೋಡೆಯಂತಹ ಅಪರಾಧಗಳಲ್ಲಿ ಭಾಗಿಯಾಗಿ ಜೈಲು ಸೇರಿದ್ದನು. ಇತ್ತೀಚೆಗಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದರೂ ಬುದ್ಧಿ ಕಲಿಯದ ಆಸಾಮಿ ಕಳ್ಳತನ ಮಾಡುತ್ತಲೇ ಇದ್ದ. ಬೆಳಗ್ಗೆ ನಗರದ ರಸ್ತೆ ರಸ್ತೆಗಳಲ್ಲೂ ಓಡಾಡಿ ಮಾಲೀಕರಿಲ್ಲದ ಮನೆಗಳನ್ನು ಗುರುತಿಸಿಕೊಂಡು, ರಾತ್ರಿ ಹೊತ್ತಿನಲ್ಲಿ ದರೋಡೆ ಮಾಡಲು ಹಿಂತಿರುಗುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ
ಪೊಲೀಸರು ತಮ್ಮ ಕ್ಷಿಪ್ರ ಕ್ರಮದಿಂದ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೊದಲು ಸಿಸಿಟಿವಿ ದೃಶ್ಯಾವಳಿಗಳನ್ನು ಆಧಾರವಾಗಿಟ್ಟುಕೊಂಡು ಪ್ರಕರಣವನ್ನು ಭೇದಿಸಲು ಸುಳಿವುಗಳನ್ನ ಹುಡುಕಿದ್ದಾರೆ.
ಅಂತಿಮವಾಗಿ ಆರೋಪಿಯನ್ನು ಗುರುತಿಸಿದ ಪೊಲೀಸರು, ರಾತ್ರಿ 9 ಗಂಟೆಗೆ ತನ್ನ ಮನೆಯಲ್ಲಿ ಮತ್ತೊಂದು ದರೋಡೆಗೆ ಸ್ಕೆಚ್ ಹಾಕಿ ಕುಳಿತಿದ್ದ ಆರೋಪಿಯನ್ನ ಬಂಧಿಸಿದ್ದಾರೆ. ಕಳ್ಳತನ ಮಾಡಿರುವ ಹಣದಿಂದ ಆರೋಪಿ ದುಬಾರಿ ಬೆಲೆಯ ಮೊಬೈಲ್ ಫೋನ್ ಹಾಗೂ ಬಟ್ಟೆ ಖರೀದಿಸಿದ್ದ. ಗುರುವಾರ ಅವನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ವರದಿಯಾಗಿದೆ.