ಬೆಳಗಾವಿ: ಪೊಲೀಸ್ ಕಾನ್ಸ್ ಟೇಬಲ್ ಓರ್ವ ತನ್ನ ಮಗುವನ್ನೆ ನೆಲಕ್ಕೆಸೆದು ಕೊಂದ ಹೃದಯವಿದ್ರಾವಕ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿ ಗ್ರಾಮದಲ್ಲಿ ನಡೆದಿದೆ.
ಬಸಪ್ಪ ಬಾಳುಬಂಕಿ ಹಸುಗೂಸನ್ನೇ ಕೊಂದ ತಂದೆ. ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ ಕಾನ್ಸ್ ಟೇಬಲ್ ಆಗಿದ್ದ ಗೋಕಾಕ ತಾಲೂಕಿನ ದುರುದುಂಡಿ ಗ್ರಾಮದ ಬಸಪ್ಪ ಬಾಳುಬಂಕಿ ಪ್ರಸ್ತುತ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಸೆ.18ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಬಸಪ್ಪ ವರ್ಷದ ಹಿಂದೆ ಚಿಂಚಲಿ ಗ್ರಾಮದ ಲಕ್ಷ್ಮೀ ಎಂಬುವವರನ್ನು ವಿವಾಹವಾಗಿದ್ದ. ಹೆರಿಗೆಗಾಗಿ ಪತ್ನಿ ಲಕ್ಷ್ಮೀ ತವರಿಗೆ ಬಂದಿದ್ದು, ನಾಲ್ಕು ತಿಂಗಳ ಹಿಂದಷ್ಟೇ ಗುಂಡು ಮಗುವಿಗೆ ಜನ್ಮ ನೀಡಿದ್ದರು. ಕಳೆದ ಭಾನುವಾರ ಮಾವನ ಮನೆಗೆ ಬಂದಿದ್ದ ಬಸಪ್ಪ, ಮಗುವನ್ನು ದುರದುಂಡಿಯ ಜಾತ್ರೆಗೆ ಕರೆದೊಯ್ಯುವುದಾಗಿ ಹೇಳಿ ಬೈಕ್ ನಲ್ಲಿ ತೆರಳಲು ಯತ್ನಿಸಿದ್ದಾನೆ. ಈ ವೇಳೆ ಪತ್ನಿ ನಾಲ್ಕು ತಿಂಗಳ ಮಗುವನ್ನು ಬೈಕ್ ನಲ್ಲಿ ಕರೆದೊಯ್ಯುವುದು ಬೇಡ ಎಂದು ತಡೆದಿದ್ದಾಳೆ. ಈ ವೇಳೆ ಪತಿ-ಪತ್ನಿ ನಡುವೆ ಜಗಳವಾಗಿ ಕೋಪದ ಬರದಲ್ಲಿ ಬಸಪ್ಪ, ಮಗುವನ್ನು ಎತ್ತಿ ರಸ್ತೆಯಲ್ಲೇ ನೆಲಕ್ಕೆಸೆದಿದ್ದಾನೆ.
ಗಂಭೀರವಾಗಿ ಗಾಯಗೊಂಡ ಮಗು ಸ್ಥಳದಲ್ಲೇ ಪ್ರಾಣ ಬಿಟ್ಟಿದೆ. ಘಟನೆ ಬಳಿಕ ಆರೋಪಿ ಬಸಪ್ಪ ಪರಾರಿಯಾಗಿದ್ದ. ಪತ್ನಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಕುಡುಚಿ ಪೊಲೀಸರು ಬಸಪ್ಪನನ್ನು ಬಂಧಿಸಿದ್ದಾರೆ.