ಧಾರವಾಡ ಜಿಲ್ಲೆಯ ಗರಗ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ 29 ವರ್ಷದ ಕುಮಾರ ಹುಚ್ಚೇಶ ತಂದೆ ಹನುಮಂತ ಮಲ್ಲೆನ್ನವರ ಸೆಪ್ಟೆಂಬರ್ 20 ರಂದು ರಸ್ತೆ ಅಪಘಾತದಲ್ಲಿ ಮರಣ ಹೊಂದಿದ್ದಾರೆ. ಇವರು ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ತಾಲೂಕಿನ ಇಂಜನವಾರೆ ಗ್ರಾಮದವರು.
ಹುಚ್ಚೇಶ, ಸೆಪ್ಟೆಂಬರ್ 20 ರಂದು ಛಬ್ಬಿ ಗಣಪತಿ ಬಂದೋಬಸ್ತ್ ಕರ್ತವ್ಯ ಮುಗಿಸಿ ಪರತ್ ಗರಗ ಪೊಲೀಸ್ ಠಾಣೆಗೆ ಮೋಟಾರ್ ಸೈಕಲ್ ಮೇಲೆ ಮಹಿಳಾ ಪೇದೆ ಲಕ್ಷ್ಮೀ ಅರಬಾವಿ ಇವರೊಂದಿಗೆ ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆ ಮೇಲೆ ಇಟಿಗಟ್ಟಿ ಗ್ರಾಮದ ಹತ್ತಿರ ಬರುತ್ತಿದ್ದಾಗ ಅಪರಿಚಿತ ವಾಹನ ಡಿಕ್ಕಿಯಾಗಿದ್ದು, ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಹಿಂಬದಿ ಕುಳಿತ ಲಕ್ಷ್ಮೀ ಅರಬಾವಿಯವರಿಗೆ ಬಲವಾದ ಗಾಯಗಳಾಗಿದ್ದು, ಎಸ್.ಡಿ.ಎಂ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತದಲ್ಲಿ ಗಂಭೀರ ಗಾಯಗಳಿಂದ ಸ್ಥಳದಲ್ಲಿಯೇ ಮೃತಪಟ್ಟಂತಹ ಹುಚ್ಚೇಶ ಮಲ್ಲೆನ್ನವರ ಅವರ ಪಾರ್ಥಿವ ಶರೀರವನ್ನು ಜಿಲ್ಲಾಸ್ಪತ್ರೆಗೆ ರವಾನಿಸಿ, ಮರಣೋತ್ತರ ಪರೀಕ್ಷೆ ಮುಗಿದ ನಂತರ ಸೆಪ್ಟೆಂಬರ್ 21 ರಂದು ಜಿಲ್ಲಾ ಪೊಲೀಸ್ ಹೆಡ್‍ಕ್ವಾರ್ಟರ್ ಧಾರವಾಡಕ್ಕೆ ತಂದು ಸಕಲ ಸರ್ಕಾರಿ ಗೌರವ ವಂದನೆಯನ್ನು ನೀಡಲಾಗಿದೆ.
ಇದೇ ಸಂದರ್ಭದಲ್ಲಿ ಪೊಲೀಸ್ ಅಧೀಕ್ಷಕರಾದ ಡಾ. ಗೋಪಾಲ ಬ್ಯಾಕೋಡ್ ಹಾಗೂ ಜಿಲ್ಲೆಯ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಮತ್ತು ಮೃತನ ಸಂಬಂಧಿಕರು ಹಾಜರಿದ್ದು, ಶ್ರದ್ದಾಂಜಲಿ ಸಲ್ಲಿಸಿದ ನಂತರ ಪಾರ್ಥಿವ ಶರೀರವನ್ನು ಸಂಬಂಧಿಕರಿಗೆ ಶವವನ್ನು ಹಸ್ತಾಂತರ ಮಾಡಲಾಯಿತು ಎಂದು ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.