ಕರ್ತವ್ಯಕ್ಕೆ ತೆರಳುತ್ತಿದ್ದ ವೇಳೆ ಕಳ್ಳರು ಮತ್ತು ಮಾದಕ ವ್ಯಸನಿ ಗ್ಯಾಂಗ್ ಚುಚ್ಚಿದ್ದ ವಿಷಕಾರಿ ಚುಚ್ಚುಮದ್ದಿನಿಂದ ಆಸ್ಪತ್ರ ಸೇರಿದ್ದ ಮುಂಬೈ ಪೊಲೀಸ್ ಕಾನ್ಸ್ ಟೇಬಲ್ ಮೂರು ದಿನದ ಜೀವನ್ಮರಣ ಹೋರಾಟ ನಂತರ ಸಾವನ್ನಪ್ಪಿದ್ದಾರೆ.
ಮುಂಬೈ ಪೊಲೀಸ್‌ನ ವರ್ಲಿ ಲೋಕಲ್ ಆರ್ಮ್ಸ್ ಡಿವಿಜನ್-3ರಲ್ಲಿ ನೇಮಕಗೊಂಡ ಕಾನ್ಸ್ ಟೇಬಲ್ ಏಪ್ರಿಲ್ 28 ರಂದು ಮಾತುಂಗಾ ಬಳಿ ರೈಲ್ವೆ ಮಾರ್ಗದಲ್ಲಿ ತೆರಳುತ್ತಿದ್ದಾಗ ದುರುಳರ ಗ್ಯಾಂಗ್ ವಿಷಕಾರಿ ಇಂಜೆಕ್ಷನ್ ಚುಚ್ಚಿತ್ತು. ಮೃತ ಕಾನ್ಸ್ ಟೇಬಲ್ ವಿಶಾಲ್ ಪವಾರ್ ಥಾಣೆ ನಿವಾಸಿಯಾಗಿದ್ದರು.
ಪ್ರಕರಣದ ತನಿಖೆ ನಡೆಸುತ್ತಿರುವ ದಾದರ್ ಸರ್ಕಾರಿ ರೈಲ್ವೇ ಪೊಲೀಸ್ (ಜಿಆರ್‌ಪಿ) ಸಿಬ್ಬಂದಿ ಪ್ರಕಾರ, ಕಾನ್ಸ್ ಟೇಬಲ್ ವಿಶಾಲ್ ಪವಾರ್ ಅವರು ಸಿವಿಲ್ ಬಟ್ಟೆಯಲ್ಲಿ ಸ್ಥಳೀಯ ರೈಲಿನಲ್ಲಿ ಕರ್ತವ್ಯಕ್ಕೆ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ರಾತ್ರಿ 9.30 ರ ಸುಮಾರಿಗೆ ಮಾಟುಂಗಾ ಮತ್ತು ಸಿಯಾನ್ ನಿಲ್ದಾಣಗಳ ನಡುವೆ ರೈಲು ನಿಧಾನಗೊಂಡಾಗ, ಹಳಿಗಳ ಬಳಿ ನಿಂತಿದ್ದ ವ್ಯಕ್ತಿಯೊಬ್ಬ ಬಾಗಿಲಿನ ಬಳಿ ಫೋನ್‌ನಲ್ಲಿ ಮಾತನಾಡುತ್ತಾ ನಿಂತಿದ್ದ ಪವಾರ್ ಅವರ ಕೈಗೆ ಹೊಡೆದಿದ್ದಾನೆ.
ಪರಿಣಾಮ ಪವಾರ್ ಕೆಳಗೆ ಬಿದ್ದಿದ್ದು ಅವರ ಫೋನ್ ಅನ್ನು ಕಳ್ಳ ಎತ್ತಿಕೊಂಡ. ರೈಲು ನಿಧಾನವಾಗಿದ್ದರಿಂದ ಪವಾರ್ ಕೆಳಗಿಳಿದು ಕಳ್ಳನನ್ನು ಬೆನ್ನಟ್ಟಿದ್ದಾರೆ. ಸ್ವಲ್ಪ ದೂರ ಕ್ರಮಿಸಿದ ನಂತರ, ದರೋಡೆಕೋರರು ಮತ್ತು ಮಾದಕ ವ್ಯಸನಿಗಳ ತಂಡ ಅವರನ್ನು ಸುತ್ತುವರೆದಿದೆ. ಪವಾರ್ ವಿರೋಧಿಸಿದಾಗ ಅವರನ್ನು ತಳ್ಳಲು ಪ್ರಾರಂಭಿಸಿದ್ದಾರೆ. ಈ ವೇಳೆ ಪವಾರ್ ಅವರನ್ನು ಕಳ್ಳರ ಗುಂಪಿನ ಸದಸ್ಯರು ಹಿಡಿದುಕೊಂಡಿದ್ದು ಓರ್ವ, ಕಾನ್ಸ್ ಟೇಬಲ್ ಬೆನ್ನಿಗೆ ವಿಷಕಾರಿ ಇಂಜೆಕ್ಷನ್ ಚುಚ್ಚಿದ್ದಾನೆ. ಅಷ್ಚೇ ಅಲ್ಲದೇ ಅವರ ಬಾಯಿಗೆ ಕೆಂಪು ಬಣ್ಣದ ದ್ರವವನ್ನು ಸುರಿದಿದ್ದಾರೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಈ ವೇಳೆ ಪವಾರ್ ಕೆಳಗೆ ಬಿದ್ದು ಪ್ರಜ್ಞೆ ತಪ್ಪಿದರು. ಮರುದಿನ ಬೆಳಿಗ್ಗೆ ಅವರಿಗೆ ಪ್ರಜ್ಞೆ ಬಂದ ನಂತರ ಮನೆಗೆ ವಾಪಸ್ಸಾದರು. ಆದರೆ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದ್ದರಿಂದ ಅವರ ಕುಟುಂಬ ಸೋಮವಾರ ಥಾಣೆ ಆಸ್ಪತ್ರೆಗೆ ದಾಖಲಿಸಿದೆ. ಚಿಕಿತ್ಸೆ ವೇಳೆ ಪವಾರ್ ಅವರ ಸ್ಥಿತಿ ಹದಗೆಟ್ಟಿದ್ದು, ಬುಧವಾರ ಮೃತಪಟ್ಟಿದ್ದಾರೆ ಎಂದು ಕೇಂದ್ರ ರೈಲ್ವೆಯ ಉಪ ಪೊಲೀಸ್ ಆಯುಕ್ತ ಮನೋಜ್ ಪಾಟೀಲ್ ಹೇಳಿದ್ದಾರೆ.
ಸ್ಥಳೀಯ ಕೊಪ್ರಿ ಠಾಣೆ ಪೊಲೀಸರು ಹೇಳಿಕೆಯನ್ನು ದಾಖಲಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ. ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಕೊಪ್ರಿ ಪೊಲೀಸ್ ಠಾಣೆಯಿಂದ ದಾದರ್ ಜಿಆರ್‌ಪಿಗೆ ವರ್ಗಾಯಿಸಲಾಗಿದೆ. ಆರೋಪಿಗಳ ಪತ್ತೆಗೆ ಹಲವು ತಂಡಗಳನ್ನು ರಚಿಸಲಾಗಿದೆ ಎಂದು ಡಿಸಿಪಿ ಪಾಟೀಲ್ ತಿಳಿಸಿದ್ದಾರೆ. ವೈದ್ಯರು ಸಾವಿನ ಕಾರಣವನ್ನು ಇನ್ನೂ ನಿರ್ದಿಷ್ಟಪಡಿಸಿಲ್ಲ. 30 ವರ್ಷದ ಪವಾರ್ ಅವರು 2015 ರಲ್ಲಿ ಪೊಲೀಸ್ ಇಲಾಖೆಯಲ್ಲಿ ನೇಮಕಗೊಂಡಿದ್ದರು.