ಬೆಂಗಳೂರು: ಪೊಲೀಸ್ ಪೇದೆಯೊಬ್ಬ ತನ್ನ ಪತ್ನಿಗೆ 150 ಬಾರಿ ಕರೆ ಮಾಡಿದ್ದಾನೆ. ಆದರೆ, ಪತಿಯ ಕರೆಗೆ ಪತ್ನಿ ಉತ್ತರಿಸದಿದ್ದಕ್ಕೆ ಕೋಪಗೊಂಡ ಪೇದೆ 230 ಕಿ.ಮೀ. ಕ್ರಮಿಸಿ ಆಕೆಯನ್ನು ಹತ್ಯೆ ಮಾಡಿರುವ ಘಟನೆ ಹೊಸಕೋಟೆಯಲ್ಲಿ ನಡೆದಿದೆ.
150 ಬಾರಿ ಕರೆ ಮಾಡಿದ್ರೂ ಉತ್ತರಿಸದಿದ್ದಕ್ಕೆ ಕೋಪಗೊಂಡ ಪೊಲೀಸ್ ಪೇದೆ ಪತ್ನಿಯ ತಾಯಿಯ ಮನೆ ತಲುಪಿ ಕತ್ತು ಹಿಸುಕಿ ಕೊಂದಿದ್ದಾನೆ. ಬಳಿಕ ತಾನೂ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸದ್ಯ ಕಾನ್‌ಸ್ಟೇಬಲ್‌ನ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆತನ ಆರೋಗ್ಯ ಚೇತರಿಸಿಕೊಂಡ ನಂತರವೇ ವಶಕ್ಕೆ ತೆಗೆದುಕೊಳ್ಳಲು ಪೊಲೀಸರು ನಿರ್ಧರಿಸಿದ್ದಾರೆ.
ವರದಿ ಪ್ರಕಾರ, ಪತ್ನಿ ಇತ್ತೀಚೆಗೆ ಮಗುವಿಗೆ ಜನ್ಮ ನೀಡಿದ್ದರು. ಕಾನ್‌ಸ್ಟೇಬಲ್‌ನ ತಾಯಿ ವರದಕ್ಷಿಣೆ ಕಿರುಕುಳ ನೀಡಿದ್ದಾರೆ ಎಂದು ಮೃತಳ ತಂದೆ ಗಂಭೀರ ಆರೋಪ ಮಾಡಿದ್ದಾರೆ. ಕಾನ್‌ಸ್ಟೇಬಲ್ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.
ಆರೋಪಿಯನ್ನು ಕಿಶೋರ್ ಎಂದು ಗುರುತಿಸಲಾಗಿದೆ. 150 ಬಾರಿ ಕರೆ ಮಾಡಿದ್ರೂ ಪತ್ನಿ ಫೋನ್ ತೆಗೆಯದಿದ್ದಕ್ಕೆ ಪತಿಗೆ ಅನುಮಾನ ಶುರುವಾಗಿದೆ. ಇತ್ತೀಚೆಗಷ್ಟೇ ಮಗುವಿಗೆ ಜನ್ಮ ನೀಡಿದ್ರಿಂದ ಆಕೆ ತನ್ನ ತಾಯಿಯ ಮನೆಯಲ್ಲಿದ್ದರು. ಕಾನ್ಸ್‌ಟೇಬಲ್ ಪತ್ನಿಯನ್ನು ಫೋನ್‌ನಲ್ಲಿ ನಿಂದಿಸಿದ್ದಾನೆ. ಅಲ್ಲದೆ, ಹೆಂಡತಿ ತನ್ನ ಕರೆಗಳಿಗೆ ಉತ್ತರಿಸದಿದ್ದಾಗ ಕೋಪಗೊಂಡು ತಾಳ್ಮೆ ಕಳೆದುಕೊಂಡಿದ್ದಾನೆ. ನಂತರ ಚಾಮರಾಜನಗರ ನಗರದಿಂದ 230 ಕಿ.ಮೀ ಪ್ರಯಾಣಿಸಿ ಹೊಸಕೋಟೆ ತಲುಪಿದ್ದಾನೆ. ಸೋಮವಾರ ಬೆಳಗ್ಗೆ ಪತ್ನಿಯ ಮನೆಗೆ ತೆರಳಿ ಕತ್ತು ಹಿಸುಕಿ ಕೊಲೆ ಮಾಡಿ ನಂತರ ವಿಷ ಕುಡಿದಿದ್ದಾನೆ.
ಪ್ರತಿಭಾ, ಕೊಲೆಯಾದ ದುರ್ದೈವಿ. ಈಕೆ ಬೆಟ್ಟಹಲಸೂರು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಸುಬ್ರಮಣಿ ಅವರ ಕಿರಿಯ ಮಗಳು. ಇಬ್ಬರೂ ಕಳೆದ ವರ್ಷ ನವೆಂಬರ್ 13, 2022 ರಂದು ವಿವಾಹವಾದರು. ಪತಿಗೆ ತನ್ನ ಪತ್ನಿಯ ಬಗ್ಗೆ ಅನುಮಾನಗೊಂಡಿದ್ದ. ಹೀಗಾಗಿ ಆಕೆಯ ಫೋನ್ ಅನ್ನು ಆಗಾಗ ಪರಿಶೀಲಿಸುತ್ತಿದ್ದ. ಯಾರೇ ಸಂದೇಶ ಕಳುಹಿಸಿದರೂ ಅಥವಾ ಕರೆ ಮಾಡಿದರೂ ಅವರ ಬಗ್ಗೆ ಮಾಹಿತಿ ತಿಳಿದುಕೊಳ್ಳುತ್ತಿದ್ದ. ಪತ್ನಿಯು ಕಾಲೇಜು ಸ್ನೇಹಿತರೊಂದಿಗೆ ಸುತ್ತಾಡುತ್ತಾಳೆ ಎಂದು ಆರೋಪಿಸಿದ್ದ.
ಭಾನುವಾರ ಸಂಜೆ ಪ್ರತಿಭಾಗೆ ಕರೆ ಮಾಡಿದ ಕಿಶೋರ್ ಯಾವುದೋ ವಿಚಾರವಾಗಿ ನಿಂದಿಸತೊಡಗಿದ. ಪ್ರತಿಭಾ ಅಳುತ್ತಿದ್ದಾಗ ಆಕೆಯ ತಾಯಿ ವೆಂಕಟಲಕ್ಷಮ್ಮ ಫೋನ್ ಕರೆ ಕತ್ತರಿಸಿದ್ದಾರೆ. ಅಳುತ್ತಿದ್ದರೆ ಅದು ಮಗುವಿನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಪ್ರತಿಭಾಗೆ ತಾಯಿ ಬುದ್ಧಿಮಾತು ಹೇಳಿದ್ದಾರೆ. ಬಳಿಕ ಮೊಬೈಲ್ ನೋಡದಂತೆ ತಾಯಿ ಹೇಳಿದ್ದಾರೆ. ಗಂಡ 150 ಬಾರಿ ಕರೆ ಮಾಡಿರುವುದು ಮರುದಿನ ಪ್ರತಿಭಾಗೆ ತಿಳಿದಿದೆ.
ಆದರೆ, ಪತ್ನಿ ತನ್ನ ಕರೆಗೆ ಉತ್ತರಿಸದಿದ್ದಕ್ಕೆ ಸಿಟ್ಟಾದ ಪತಿ ಪೇದೆ, ಮನೆಗೆ ಬಂದು ಪತ್ನಿಯ ಕತ್ತುಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ ತಾನೂ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸದ್ಯ, ಮೃತಳ ತಂದೆಯ ದೂರಿನ ಆಧಾರದ ಮೇಲೆ ಆರೋಪಿ ಕಿಶೋರ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ.