ಬೆಂಗಳೂರು: ಬಿಜೆಪಿ ಮುಖಂಡರೊಬ್ಬರ ಬೆತ್ತಲೆ ವಿಡಿಯೋ ಇದೆ ಎಂದು ಬೆದರಿಸಿ ಹಣ ಸುಲಿಗೆ ಮಾಡಿರುವ ಘಟನೆ ನಡೆದಿದ್ದು, ಈ ಸಂಬಂಧ ಬಿಜೆಪಿ ಮುಖಂಡ ಕೇಂದ್ರ ವಿಭಾಗದ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ.
ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣದ ಫೇಸ್ಬುಕ್ ಮೂಲಕ ಬಿಜೆಪಿ ಮುಖಂಡನನ್ನು ಪರಿಚಯಿಸಿಕೊಂಡಿದ್ದ ಮಹಿಳೆ ಮುಖಂಡನ ವಾಟ್ಸಾಪ್ ನಂಬರ್ ಪಡೆದು ಸಲುಗೆ ಬೆಳೆಸಿಕೊಂಡು ಚಾಟಿಂಗ್ ಮಾಡಿದ್ದಾಳೆ. ನಂತರದಲ್ಲಿ ವಿಡಿಯೋ ಕಾಲ್ ಮಾಡಿ ಅನುಚಿತವಾಗಿ ವರ್ತಿಸಿದ್ದಾಳೆ ಎನ್ನಲಾಗಿದೆ.
ಕೆಲವು ದಿನಗಳ ನಂತರ ಬಿಜೆಪಿ ಮುಖಂಡರಿಗೆ ಅಪರಿಚಿತ ವ್ಯಕ್ತಿ ಕರೆ ಮಾಡಿ ಯುವತಿಯೊಂದಿಗೆ ನಗ್ನವಾಗಿರುವ ನಿಮ್ಮ ವಿಡಿಯೋಗಳಿವೆ ಎಂದು ಹೇಳಿದ್ದಲ್ಲದೇ ಹಣ ಕೊಡದಿದ್ದರೆ ಅವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಸಿದ್ದಾನೆ. ಇದರಿಂದ ಬೆದರಿದ ಬಿಜೆಪಿ ಮುಖಂಡ ಒಂದಿಷ್ಟು ಹಣ ನೀಡಿದ್ದು, ಮತ್ತೆ ಮತ್ತೆ ಹಣಕ್ಕೆ ಬೇಡಿಕೆ ಇಟ್ಟಿದ್ದರಿಂದ ಕೇಂದ್ರ ವಿಭಾಗದ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ ಎಂದು ಹೇಳಲಾಗಿದೆ.