ಚಿಕ್ಕಮಗಳೂರು: ಮಾವನ ಮನೆಯ ಪಿತೃಪಕ್ಷದ ಬಾಡೂಟಕ್ಕೆ ಹೋಗಲು ಬಸ್ ಸಿಗದ ಕಾರಣ ಗಲಾಟೆಯಾಗುತ್ತಿದೆ ಎಂದು ಪೊಲೀಸರಿಗೆ ಬರ ಹೇಳಿದ ವ್ಯಕ್ತಿಯೊಬ್ಬ ಮಾವನ ಮನೆಗೆ ಡ್ರಾಪ್ ಮಾಡುವಂತೆ ಮನವಿ ಮಾಡಿದ್ದಾನೆ.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕು ಕೊಟ್ಟಿಗೆಹಾರ ಸಮೀಪದ ತರುವೆ ಗ್ರಾಮದ ಅಶೋಕ ಇಂತಹ ಕೃತ್ಯ ಎಸಗಿದ ವ್ಯಕ್ತಿ. ಫಲ್ಗುಣಿಯಲ್ಲಿರುವ ತನ್ನ ಮಾವನ ಮನೆಗೆ ಪಿತೃ ಪಕ್ಷದ ಬಾಡೂಟಕ್ಕೆ ಹೋಗಲು ಗುರುವಾರ ರಾತ್ರಿ ಮನೆಯಿಂದ ಹೊರಟಿದ್ದ ಅಶೋಕನಿಗೆ ಯಾವುದೇ ವಾಹನ ಸಿಗಲಿಲ್ಲ.
ನಿರಂತರ ಮಳೆಯಾಗುತ್ತಿದ್ದ ಕಾರಣ ಕಾದು ಕಾದು ಸುಸ್ತಾದ ಅಶೋಕ ಖತರ್ನಾಕ್ ಉಪಾಯ ಮಾಡಿದ್ದಾನೆ. ಮನೆಯಲ್ಲಿ ತುಂಬಾ ಗಲಾಟೆಯಾಗುತ್ತಿದೆ ಕೊಟ್ಟಿಗೆಹಾರಕ್ಕೆ ಬೇಗ ಬನ್ನಿ ಎಂದು 112ಗೆ ಕರೆ ಮಾಡಿದ್ದಾನೆ. ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಎಲ್ಲಿ ಗಲಾಟೆ ಆಗಿದೆ ಎಂದು ಅಶೋಕನಿಗೆ ಕೇಳಿದ್ದಾರೆ. ಯಾವ ಗಲಾಟೆ ಇಲ್ಲ. ನಾನು ಫಲ್ಗುಣಿಯಲ್ಲಿರುವ ಮಾವನ ಮನೆಗೆ ಪಿತೃ ಪಕ್ಷದ ಊಟಕ್ಕೆ ಹೋಗಬೇಕಿತ್ತು. ಅದಕ್ಕೆ ನಿಮಗೆ ಕರೆ ಮಾಡಿದ್ದೇನೆ. ನನ್ನನ್ನು ಡ್ರಾಪ್ ಮಾಡಿ ಎಂದು ಕೇಳಿಕೊಂಡಿದ್ದಾನೆ.
ಆತನಿಗೆ ಬುದ್ಧಿವಾದ ಹೇಳಿದ ಪೊಲೀಸರು, ಸಮಾಜದ ಸರ್ಕಾರದ ಕೆಲಸ ಮಾಡುವುದಕ್ಕೆ ಪೊಲೀಸ್ ಜೀಪ್ ಇದೆ. ನಿಮ್ಮನ್ನು ಮಾವನ ಮನೆಗೆ ಬಿಡಲು ಅಲ್ಲ, ಇನ್ನೊಮ್ಮೆ ಈ ರೀತಿ ಮಾಡಬೇಡ ಎಂದು ಹೇಳಿದ್ದಾರೆ. ಅದೇ ಮಾರ್ಗವಾಗಿ ತೆರಳುತ್ತಿದ್ದ ಲಾರಿಗೆ ಅಡ್ಡ ಹಾಕಿ ಅಶೋಕನನ್ನು ಹತ್ತಿಸಿ ಮಾವನ ಮನೆಗೆ ಕಳುಹಿಸಿಕೊಟ್ಟಿದ್ದಾರೆ.