ಮಂಗಳೂರು: ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನವೀನ್ ಎಂಬಾತ ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರ ಮಾಡಿ ಪರಾರಿಯಾಗಿದ್ದ. ಬಾಲಕಿ ನೀಡಿದ ಹೇಳಿಕೆ ಹಿನ್ನೆಲೆಯಲ್ಲಿ ಅಲ್ಲಿನ ಪೊಲೀಸ್ ಅಧಿಕಾರಿ ಎಸ್.ಐ. ರೋಸಮ್ಮ ಪಿ.ಪಿ ಅವರು ನವೀನ್ ಮೇಲೆ ಪೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಆದರೆ ಈ ನವೀನ್ ಆರೋಪಿ ನವೀನ್ ಅಲ್ಲ ಎಂಬುದು ಗೊತ್ತಾಗಿದೆ.
ಹೌದು, ಪೋಕ್ಸೋ ಪ್ರಕರಣದಲ್ಲಿ ನಿರಪರಾಧಿಯನ್ನು ಬಂಧಿಸುವ ಮೂಲಕ ದೊಡ್ಡ ಎಡವಟ್ಟು ಮಾಡಿದ್ದಾರೆ ಪೊಲೀಸರು. ಇವರ ಎಡವಟ್ಟಿನಿಂದ ನವೀನ್ ಎಂಬ ನಿರಪರಾಧಿ ಸುಮಾರು ಒಂದು ವರ್ಷ ಕಾಲ ನ್ಯಾಯಾಂಗ ಬಂಧನದಲ್ಲಿ ಇದ್ದರು. ಇದೀಗ ಹೀಗೆ ಎಡವಟ್ಟು ಮಾಡಿದ ಮಹಿಳಾ ಪೊಲೀಸ್ ಅಧಿಕಾರಿಗಳಿಬ್ಬರಿಗೆ ಕೋರ್ಟ್ ದಂಡ ವಿಧಿಸಿದೆ.
ಅಷ್ಟೆ ಅಲ್ಲ ಈ ಅಧಿಕಾರಿಗಳು 5 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಇಲ್ಲಿನ ಎರಡನೇ ಹೆಚ್ಚುವರಿ ಎಫ್‌ಟಿಎಸ್‌ಸಿ ಪೋಕ್ಸೋ ನ್ಯಾಯಾಲಯ ಆದೇಶ ನೀಡಿದೆ. ಆರೋಪಿ ಪರ ವಕೀಲರಾದ ರಾಜೇಶ್‌ಕುಮಾರ್ ಮತ್ತು ಗಿರೀಶ್ ಶೆಟ್ಟಿ ಅವರು ವಾದ ಮಂಡನೆ ಮಾಡಿದ್ದಾರೆ. ವಾದ ಪ್ರತಿವಾದ ಕೇಳಿದ ನ್ಯಾಯಾಧೀಶ ಕೆ.ಯು. ರಾಧಾಕೃಷ್ಣ ಅವರು, ನವೀನ್ ಸಿಕ್ವೇರ ಅವರನ್ನು ನಿರಪರಾಧಿ ಎಂದು ಖುಲಾಸೆಗೊಳಿಸಿದ್ದಾರೆ. ಇಬ್ಬರು ಪೊಲೀಸ್ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ರಾಜ್ಯ ಸರಕಾರದ ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೂ ಆದೇಶಿಸಿದ್ದಾರೆ.