ಉತ್ತರ ಪ್ರದೇಶದ ಬಾಂಡಾ ಜಿಲ್ಲೆಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ಯುವಕನೊಬ್ಬ ಅತ್ತಿಗೆ ಮೇಲೆ ಅತ್ಯಾಚಾರ ಎಸಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
ಬಿಸಂಡಾ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಘಟನೆ ನಡೆದಿದೆ. ಬಿಸಂಡಾ ಪೊಲೀಸ್ ಠಾಣೆ ಉಸ್ತುವಾರಿ ಇನ್ಸ್ ಪೆಕ್ಟರ್ ನರೇಂದ್ರ ಪ್ರತಾಪ್ ಸಿಂಗ್ ಅವರು ನೀಡಿರುವ ಮಾಹಿತಿಯಂತೆ, ಬುಧವಾರ ಸಂಜೆ ಘಟನೆ ನಡೆದಿದೆ.
26 ವರ್ಷದ ಸಂತ್ರಸ್ತೆಯ ಪತಿ ಕೆಲಸಕ್ಕಾಗಿ ಬೇರೆ ಕಡೆ ಹೋಗಿದ್ದು, ಸಂತ್ರಸ್ತೆ ಮನೆಯಲ್ಲಿ ಒಬ್ಬಳೇ ಇದ್ದಳು. ಈ ವೇಳೆ ಮನೆಯಲ್ಲಿದ್ದ 24 ವರ್ಷದ ಮೈದುನ ಆಕೆಯನ್ನು ಬೆದರಿಸಿ ಅತ್ಯಾಚಾರವೆಸಗಿ ಪರಾರಿಯಾಗಿದ್ದಾನೆ. ಯಾರಿಗಾದರೂ ಹೇಳಿದರೆ ಎರಡೂವರೆ ವರ್ಷದ ಮಗುವನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ನಂತರದಲ್ಲಿ ಪೊಲೀಸರಿಗೆ ದೂರು ನೀಡಲಾಗಿದ್ದು, ಪರಾರಿಯಾಗಿದ್ದ ಆರೋಪಿಯನ್ನು ಶುಕ್ರವಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.