ಚಾಮರಾಜನಗರ: ಆನೆ ದಂತಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಅರಣ್ಯ ಇಲಾಖೆ ವಾಚರ್ ಸೇರಿ ಇಬ್ಬರನ್ನು ಪೊಲೀಸ್ ಅರಣ್ಯ ಸಂಚಾರಿ ದಳ ಸಿಬ್ಬಂದಿ ಬಂಧಿಸಿದ್ದಾರೆ.
ಕೊಳ್ಳೇಗಾಲದ ಮೋಳೆ ಬಡಾವಣೆಯ ನಿವಾಸಿ ಎನ್. ಬಸವರಾಜ್(36), ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಜಾಗೇರಿ ದೊಡ್ಡಮಾಕಳಿ ಬೀಟ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವಾಚರ್ ಚಂದ್ರಶೇಖರ್(27) ಬಂಧಿತ ಆರೋಪಿಗಳು. ಮತ್ತೊಬ್ಬ ಆರೋಗ್ಯ ಪುಟ್ಟಸ್ವಾಮಿ(55) ಪರಾರಿಯಾಗಿದ್ದಾನೆ.
ಬಂಧೊತರಿಂದ 13.5 ಕೆಜಿ ತೂಕದ ಎರಡು ಆನೆ ದಂತಗಳು, ಸಾಗಾಣೆ ಮಾಡಲು ಬಳಸಿದ್ದ ಬೈಕ್ ಜಪ್ತಿ ಮಾಡಲಾಗಿದೆ. ಆನೆ ದಂತಗಳನ್ನು ಮಾರಾಟ ಮಾಡಲು ಬೈಕ್ ನಲ್ಲಿ ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಸಿಐಡಿ ಪೊಲೀಸ್ ಅರಣ್ಯ ಸಂಚಾರ ದಳದ ಎಸ್ಐ ವಿಜಯರಾಜ್ ಮತ್ತು ಸಿಬ್ಬಂದಿ ಕೊಳ್ಳೇಗಾಲದ ಮೋಳೆ ರಿಂಗ್ ರಸ್ತೆಯ ಸಮೀಪದ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.