ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕು ಶಿರಾಳಕೊಪ್ಪದಲ್ಲಿ ಭಾನುವಾರ ಸಂತೆ ನಡೆಯುವಾಗ ಸಿಡಿಮದ್ದು ಸ್ಫೋಟಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಹಾವೇರಿ ಜಿಲ್ಲೆ ಹಾನಗಲ್ ನಿವಾಸಿ ಉಮೇಶ ಗೊಲ್ಲರ(35), ಆತನಿಗೆ ಸಿಡಿಮದ್ದು ಮಾರಾಟ ಮಾಡಿದ್ದ ಉತ್ತರ ಕನ್ನಡ ಜಿಲ್ಲೆ ಮುಂಡಗೋಡು ನಿವಾಸಿ ಕರಿಯಪ್ಪ(60) ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಶಿರಸಿಯ ತೋಟದಲ್ಲಿ ಕೆಲಸ ಮಾಡುವಾಗ ಹಂದಿ ಹಿಡಿಯಲು ಉಮೇಶ ಸಿಡಿಮದ್ದು ಇಟ್ಟಿದ್ದ. ಆದರೆ, ಹಂದಿಗಳು ಬೀಳದ ಕಾರಣ ಶಿರಾಳಕೊಪ್ಪದಲ್ಲಿ ಪತ್ನಿ ಮನೆಗೆ ಹೊರಟಿದ್ದ ಆತ ಯಾರಿಗಾದರೂ ಮಾರಾಟ ಮಾಡಬಹುದೆಂದು ಕೈಚೀಲದಲ್ಲಿ ಸಿಡಿಮದ್ದು ತಂದಿದ್ದಾನೆ. ಶಿರಾಳಕೊಪ್ಪ ಸಂತೆಯಲ್ಲಿ ಪತ್ನಿಯೊಂದಿಗೆ ಬೆಡ್ ಶೀಟ್ ಖರೀದಿಸಿದ ನಂತರ ಅಲ್ಲೇ ಅಂಗಡಿಯಲ್ಲಿ ಬ್ಯಾಗ್ ಇಟ್ಟಿದ್ದು, ಅದು ಸ್ಪೋಟಗೊಂಡಿದೆ. ಸಿಡಿಮದ್ದು ಮಾರಿದರೆ ದುಡ್ಡು ಸಿಗುತ್ತದೆ ಎಂದು ಚೀಲದಲ್ಲಿ ತಂದಿದ್ದ ಕೃಷಿ ಕೂಲಿ ಕಾರ್ಮಿಕ ಉಮೇಶ ಪೊಲೀಸರ ಅತಿಥಿಯಾಗಿದ್ದಾನೆ. ಆತನಿಗೆ ಸಿಡಿಮದ್ದು ಮಾರಿದ ವ್ಯಕ್ತಿಯೂ ಬಂಧಿತನಾಗಿದ್ದಾನೆ.