ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿಯ ಚಾರ್ಮಾಡಿಯಲ್ಲಿ ನೈತಿಕ ಪೊಲೀಸ್ ಗಿರಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ದಿನೇಶ್, ಸಚಿನ್, ನಿತೇಶ್ ತೋಟಂತಾಡಿ, ಅವಿನಾಶ್ ಯಾನೆ ರಾಹುಲ್ ಬಂಧಿತ ಆರೋಪಿಗಳಾಗಿದ್ದಾರೆ. ಕಕ್ಕಿಂಜೆ ನಿವಾಸಿ ಮೊಹಮ್ಮದ್ ಜಾಹೀರ್ ಎಂಬುವರ ಮೇಲೆ ಹಲ್ಲೆ ನಡೆಸಿದ ಬಗ್ಗೆ ಆರೋಪಿತರ ವಿರುದ್ಧ ಪ್ರಕರಣ ದಾಖಲಾಗಿದೆ. ಸೋಮವಾರ ಊರಿಗೆ ಬಸ್ ಲ್ಲಿ ಬರುತ್ತಿದ್ದ ವೇಳೆ ಪರಿಚಯದ ಯುವತಿಯೊಂದಿಗೆ ಮೊಹಮ್ಮದ್ ಜಾಹೀರ್ ಮಾತನಾಡಿದ್ದ. ಯುವತಿ ಬೆಳ್ತಂಗಡಿಯಲ್ಲಿ ಇಳಿದು ಮನೆಗೆ ತೆರಳಿದ್ದು, ಜಾಹೀರ್ ಯುವತಿಯೊಂದಿಗೆ ಮಾತನಾಡಿದ ವಿಚಾರ ತಿಳಿದ ಯುವಕರ ತಂಡ ಬಸ್ ನಿಂದ ಆತನನ್ನು ಕೆಳಗೆ ಇಳಿಸಿ ಹಲ್ಲೆ ಮಾಡಿದೆ ಎಂದು ಆರೋಪಿಸಲಾಗಿದೆ. ಜಾಹೀರ್ ಬೆಳ್ತಂಗಡಿ ಠಾಣೆ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.