ಮಳೆಗಾಲ ಶುರುವಾಗಿದ್ದಾಗಿದೆ. ಆರಂಭವೇ ಇಷ್ಟು ವೈಲಂಟ್ ಆಗಿರುವಾಗ, ಮುಂದಿನ ದಿನಗಳು ಹೇಗಿರಲಿದೆಯೋ ಏನೋ ಅನ್ನೋ ಆತಂಕ ಕಾಡ್ತಿದೆ. ಅದರಲ್ಲೂ ಒಂದೇ ಸಮನೆ ಸುರಿಯುತ್ತಿರುವ ಮಳೆಗೆ ಕೆರೆ, ಹಳ್ಳ,ಕೊಳ್ಳಗಳು ತುಂಬಿ ಹೋಗಿರುತ್ತೆ. ನದಿ-ತೊರೆ-ಜಲಪಾತಗಳು ತುಂಬಿ ಉಕ್ಕಿ ಹರಿಯುತ್ತಿರುತ್ತೆ. ಮಳೆಗಾಲದಲ್ಲಿ ಇವೆಲ್ಲ ಮೈದುಂಬಿಕೊಂಡು ಹರಿಯುತ್ತಿರೊ ದೃಶ್ಯ ನೋಡುವುದೇ ಕಣ್ಣಿಗೆ ಹಬ್ಬ.
ಈ ಮನಮೋಹಕ ದೃಶ್ಯ ನೋಡುವುದಕ್ಕೊಸ್ಕರವೇ, ಕೆಲವರು ಮಳೆಗಾಲ ಬರಲಿ ಅಂತ ಕಾಯುತ್ತಿರುತ್ತಾರೆ. ಮಳೆಗಾಲ ಬಂದರೆ ಸಾಕು ಪ್ರಕೃತಿಯ ಮಡಿಲಲ್ಲಿ ಕಳೆದುಹೋಗಿ ಬಿಡೋಣ ಅಂತ ಹೊರಟೇ ಬಿಡುತ್ತಾರೆ. ಅದರಲ್ಲೂ ಜನರು ಜಲಪಾತಗಳತ್ತ ಹೋಗೋದು ಹೆಚ್ಚು. ಆದರೆ ಮುಂಬೈ ಪೊಲೀಸರು ತುಂಬಿ ಹರಿಯುವ ನದಿಗಳತ್ತ ಹಾಗೂ ಜಲಪಾತಗಳತ್ತ ಹೋಗದಿರಿ ಅಂತ ಪ್ರವಾಸಿಗರಿಗೆ ಮನವಿ ಮಾಡಿದ್ದಾರೆ.
ಧಾರಾಕಾರ ಮಳೆಗೆ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಚಿಕ್ಕ ಅಜಾಗರೂಕತೆ ದೊಡ್ಡ ಅಪಾಯಕ್ಕೆ ಕಾರಣವಾಗಿರುತ್ತೆ. ಅದರಲ್ಲೂ ಖಾರ್ಘರ್ನ ಪಾಂಡವಕಡ ಜಲಪಾತ, ಪನ್ವೇಲ್‌ನ ಅದೈ ಜಲಪಾತ, ಗಡೇಶ್ವರ ಜಲಪಾತಗಳತ್ತ ಪ್ರವಾಸಿಗರ ಪ್ರವೇಶ ನಿಷೇಧಿಸಲಾಗಿದೆ. ಆದರೂ ಪ್ರವಾಸಿಗರು ಪೊಲೀಸರ ಕಣ್ಣು ತಪ್ಪಿಸಿ ಹೋಗುತ್ತಿದ್ದಾರೆ ಎಂದು ಪೊಲೀಸ್ ಆಯುಕ್ತರು ಶಿವರಾಜ್ ಪಾಟೀಲ್ ಹೇಳಿದ್ದಾರೆ.
ಕಳೆದ ವರ್ಷ ಕೂಡಾ ಇದೇ ರೀತಿ ಕೆಲ ಪ್ರದೇಶಗಳಲ್ಲಿ ಪ್ರವಾಸಿಗರು ಹೋಗುವುದನ್ನ ನಿಷೇಧ ಮಾಡಲಾಗಿತ್ತು. ಆದರೂ ಕೆಲವರು ಹೋಗಿದ್ದಾರೆ. ಅವರಿಗೆ ದಂಡ ಕೂಡಾ ವಿಧಿಸಲಾಗಿತ್ತು. ಇನ್ನು ಪನ್ವೇಲ್‌ನ ಅರಣ್ಯಾಧಿಕಾರಿಗಳ ಪ್ರಕಾರ ಪಾಂಡವ ಕಡ ಸೇರಿದಂತೆ ಅನೇಕ ಕಡೆಗಳಲ್ಲಿ ಸರಿಯಾದ ವ್ಯವಸ್ಥೆಗಳಿಲ್ಲ. ಆದ್ದರಿಂದ ಅಲ್ಲಿ ಹೆಜ್ಜೆ-ಹೆಜ್ಜೆಗೂ ಅಪಾಯ ಎದುರಿಸಬೇಕಾಗುತ್ತೆ. ಕೆಲವು ಬಾರಿಯಂತೂ ನಡು ನೀರಿನಲ್ಲಿ ಜನರು ಸಿಕ್ಕಾಕಿಕೊಂಡು ಪರದಾಡಿದ್ದಾರೆ. ಇದೇ ಕಾರಣಕ್ಕೆ ಇಂತಹ ಅಪಾಯದ ಪ್ರದೇಶಗಳತ್ತ ಹೋಗದಿರಲು ನವೀ ಮುಂಬೈ ಪೊಲೀಸರು ಮನವಿ ಮಾಡಿದ್ದಾರೆ.