ಪೋಕೆಮನ್ ಎಂಬ ಕಾರ್ಟೂನ್ ಮಾತ್ರ ಮಕ್ಕಳಿಗೆ ಅದರಲ್ಲೂ ಹೆಚ್ಚಾಗಿ ಬಾಲಕರಿಗೆ ತುಂಬಾನೇ ಇಷ್ಟವಾಗುವಂತಹ ಪಾತ್ರ. ಅನೇಕ ಮಕ್ಕಳು ಪೋಕೆಮನ್ ಕಾರ್ಡ್ಗಳನ್ನ ಸಂಗ್ರಹಿಸುವ ಅಭ್ಯಾಸವನ್ನೂ ಇಟ್ಟುಕೊಂಡಿರ್ತಾರೆ. ಇದೇ ರೀತಿ ಅಭ್ಯಾಸವನ್ನ ಹೊಂದಿದ್ದ ಅಮೆರಿಕದ 8 ವರ್ಷದ ಬಾಲಕನೊಬ್ಬ ಒಂದೊಳ್ಳೆ ಉದ್ದೇಶಕ್ಕಾಗಿ ತನ್ನ ಕಾರ್ಡುಗಳನ್ನ ಮಾರಾಟ ಮಾಡುವ ಮೂಲಕ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದಾನೆ.
ಬ್ರೈಸನ್ ಕೈಲ್ಮನ್ ಎಂಬ ಬಾಲಕ ಪೋಕೆಮನ್ ಪಾತ್ರವನ್ನ ನೆಚ್ಚಿಕೊಂಡಿದ್ದ. ಈತನ ಬಳಿ ಪೋಕೆಮನ್ ಕಾರ್ಡ್ಗಳ ಅಗಾಧ ಸಂಗ್ರಹವಿತ್ತು. ಆದರೆ ಆತನ ಶ್ವಾನವು ಒಂದು ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದರಿಂದ ಅದರ ಪ್ರಾಣವನ್ನ ಉಳಿಸಲು 700 ಡಾಲರ್ ಮೌಲ್ಯದ ಚಿಕಿತ್ಸೆ ಮಾಡಬೇಕಾದ ಅನಿವಾರ್ಯತೆ ಬ್ರೈಸನ್ಗೆ ಎದುರಾಯ್ತು. ಮನೆಯಲ್ಲಿ ಇಷ್ಟು ಹಣವನ್ನ ಹೊಂದಿಸೋಕೆ ಶಕ್ತರಿಲ್ಲದ ಕಾರಣ ಈತ ತನ್ನ ಪೋಕೆಮನ್ ಕಾರ್ಡುಗಳನ್ನ ಮಾರಾಟ ಮಾಡಲು ನಿರ್ಧರಿಸಿದ್ದ. ತನ್ನ ಮನೆಯ ಮುಂದೆ ಪೋಕೆಮನ್ ಮಾರಾಟಕ್ಕಿದೆ ಎಂದು ಬೋರ್ಡ್ ಹಾಕಿ ತನ್ನ ಪ್ರೀತಿಯ ಕಾರ್ಡ್ಗಳನ್ನ ಮಾರಾಟ ಮಾಡಲು ಮುಂದಾಗಿದ್ದಾನೆ.
ಈ ರೀತಿ ಕಾರ್ಡುಗಳನ್ನ ಮಾರಾಟ ಮಾಡಿ 800 ಡಾಲರ್ ಹೊಂದಿಸೋದು ಬಾಲಕನ ಗುರಿಯಾಗಿತ್ತು. ಆದರೆ ಆತ ಈಗ ಬರೋಬ್ಬರಿ 5490 ಡಾಲರ್ಗಳನ್ನ ಗಳಿಸುವಲ್ಲಿ ಯಶಸ್ವಿಯಾಗಿದ್ದಾನೆ. ಈ ವಿಚಾರ ಪೋಕೆಮನ್ ಕೇಂದ್ರ ಕಚೇರಿಗೂ ಹೋಗಿ ತಲುಪಿದ್ದು ಬಾಲಕನಿಗೆ ಅತ್ಯಂತ ದುಬಾರಿ ಅತೀ ವಿರಳವಾದ ಪೋಕೆಮನ್ ಕಾರ್ಡುಗಳನ್ನ ಉಡುಗೊರೆಯಾಗಿ ನೀಡಿದೆ.
ಬೈಸನ್ ನಿಮ್ಮ ಕತೆಯನ್ನ ಕೇಳಿ ನಾವು ಸ್ಪೂರ್ತಿಗೊಂಡಿದ್ದೇವೆ. ಶ್ವಾನದ ಚಿಕಿತ್ಸೆಗಾಗಿ ನೀವು ಪೋಕೆಮನ್ ಕಾರ್ಡುಗಳನ್ನ ಮಾರಾಟ ಮಾಡಿ ಹಣ ಹೊಂದಿಸಿದ್ದೀರಾ. ಹೀಗಾಗಿ ಈ ಕಾರ್ಡುಗಳ ಸಹ ನಿಮ್ಮ ಅನಿವಾರ್ಯ ಸ್ಥಿತಿಯಲ್ಲಿ ಸಹಾಯಕ್ಕೆ ಬರಬಹುದು ಎಂದು ಭಾವಿಸಿದ್ದೇವೆ ಎಂದು ಪೋಕೆಮನ್ ಸಿಬ್ಬಂದಿ ಹೇಳಿದ್ದಾರೆ.