ಮೀನು ಕಾರ್ಖಾನೆಯಲ್ಲಿ ವಿಷಾನಿಲ ಸೋರಿಕೆಯಾದ ಪರಿಣಾಮ ಐವರು ಸಾವನ್ನಪ್ಪಿದ ಘಟನೆಯು ಮಂಗಳೂರಿನಲ್ಲಿ ನಡೆದಿದೆ. ಎಂಎಸ್ಇಜೆಡ್ನ ಶ್ರೀ ಉಲ್ಕಾ ಫಿಶ್ ಕಾರ್ಖಾನೆಯಲ್ಲಿ ಈ ಘಟನೆ ಸಂಭವಿಸಿದ್ದು ಈ ದುರಂತದಲ್ಲಿ ಮೂವರ ಆರೋಗ್ಯ ಏರುಪೇರಾಗಿದೆ ಎನ್ನಲಾಗಿದೆ.
ಮೃತಪಟ್ಟವರನ್ನು ಸಮಿಉಲ್ಲಾ ಇಸ್ಲಾಮ್, ಉಮ್ಮರ್ ಫಾರೂಕ್, ನಿಜಾಮುದ್ದೀನ್, ಮಿರಾಜುಲ್ ಇಸ್ಲಾಂ ಹಾಗೂ ಶರಾಫತ್ ಅಲಿ ಎಂದು ಗುರುತಿಸಲಾಗಿದೆ. ನಿನ್ನೆ ರಾತ್ರಿ ಈ ದುರ್ಘಟನೆ ಸಂಭವಿಸಿದ್ದು ಮೂವರು ನಿನ್ನೆಯೆ ಸಾವನ್ನಪ್ಪಿದ್ದರು. ಇಂದು ಮುಂಜಾನೆ ಇನ್ನಿಬ್ಬರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಅಸ್ವಸ್ಥರಾದ ಮೂವರನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮುಂಬೈ ಮೂಲದ ರಾಜು ಎಂಬವರಿಗೆ ಸೇರಿದ ಈ ಕಾರ್ಖಾನೆಯ ಮೀನು ಸಂಸ್ಕರಣಾ ಕಂಪನಿಯ ತ್ಯಾಜ್ಯ ಸಂಗ್ರಹ ತೊಟ್ಟಿಯಲ್ಲಿ ಪಶ್ಚಿಮ ಬಂಗಾಳ ಮೂಲದ ಈ ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದರು ಎನ್ನಲಾಗಿದೆ. ಈ ಪ್ರಕರಣ ಸಂಬಂಧ ಪೊಲೀಸರು ಪ್ರೊಡಕ್ಷನ್ ಮ್ಯಾನೇಜರ್ ರೂಬಿ ಜೋಸೆಫ್, ಏರಿಯಾ ಮ್ಯಾನೇಜರ್ ಕುಬೇರ್ ಗಾಡೆ ಹಾಗೂ ಸೂಪರ್ವೈಸರ್ ಮೊಹಮ್ಮದ್ ಅನ್ವರ್ರನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.