ಶಿವಮೊಗ್ಗ: ಹೊಸ ವರ್ಷಕ್ಕೆ ಶುಭಾಶಯ ಕೋರುವ ನೆಪದಲ್ಲಿ ಶಿವಮೊಗ್ಗದ ಖ್ಯಾತ ವೈದ್ಯ ಹಾಗೂ ವಿಧಾನಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಅವರ ಹೆಸರಲ್ಲಿ ಗಣ್ಯರಿಗೆ ಕೋರಿಯರ್ ಮೂಲಕ ವಿಷ ಮಿಶ್ರಿತ ಲಡ್ಡು ಕಳುಹಿಸಲಾಗಿದೆ.
ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್. ನಾಗರಾಜ್ ಹಾಗೂ ಅಜೀವ ಸದಸ್ಯ ಡಾ. ಎಸ್.ಟಿ. ಅರವಿಂದ್ ಸೇರಿದಂತೆ ಹಲವು ಗಣ್ಯರಿಗೆ ಬುಧವಾರ ಲಡ್ಡು ಹೊಂದಿರುವ ಬಾಕ್ಸ್ ಅನ್ನು ಧನಂಜಯ ಸರ್ಜಿ ಅವರ ಭದ್ರಾವತಿಯಿಂದ ಡಿಟಿಡಿಸಿ ಕೊರಿಯರ್ ಮೂಲಕ ಕಳುಹಿಸಲಾಗಿದೆ.
ಧನಂಜಯ ಸರ್ಚಿ ಅವರ ಹೆಸರಲ್ಲಿ ಶುಭಾಶಯ ಪತ್ರ ಇರುವುದನ್ನು ಗಮನಿಸಿದ ನಾಗರಾಜ್ ಅವರು ಅಭಿನಂದನೆ ಹೇಳಲು ಕರೆ ಮಾಡಿದ್ದಾರೆ. ಆದರೆ ತಾವು ಯಾವುದೇ ಸಿಹಿ ತಿನಿಸು ಕಳುಹಿಸಿಲ್ಲ ಎಂದು ಧನಂಜಯ ಸರ್ಜಿ ತಿಳಿಸಿದ್ದು, ಕೂಡಲೇ ಸರ್ಜಿ ಅವರ ಆಪ್ತ ಸಹಾಯಕರು ಅದನ್ನು ಸೇವಿಸದಂತೆ ತಿಳಿಸಿ ಕೋಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಬಾಕ್ಸ್ ನಲ್ಲಿ ಇದ್ದ ಲಡ್ಡು ಕಹಿಯಾಗಿದ್ದು, ಅದರಲ್ಲಿ ಏನಾದರೂ ಮಿಶ್ರಣ ಮಾಡಿರಬಹುದೆಂಬ ಅನುಮಾನ ವ್ಯಕ್ತವಾಗಿದೆ. ಲಡ್ಡಿನ ಮಾದರಿಯನ್ನು ಎಫ್ಎಸ್ಎಲ್ ಗೆ ಕಳುಹಿಸಲಾಗಿದ್ದುಮ ತನಿಖೆ ಕೈಗೊಳ್ಳಲಾಗಿದೆ.