ಗದಗ: ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಕೆಲೂರ ಗ್ರಾಮದಲ್ಲಿ ರೈತರ ಮಹಿಳೆಯರಿಬ್ಬರು ವಿಷ ಸೇವಿಸಿದ್ದು ಒಬ್ಬರು ಮೃತಪಟ್ಟಿದ್ದಾರೆ. ಮತ್ತೊಬ್ಬರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಗರ್ ಹುಕುಂ ಸಾಗುವಳಿದಾರರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಒಕ್ಕಲೆಬ್ಬಿಸಲು ಮುಂದಾಗಿದ್ದನ್ನು ವಿರೋಧಿಸಿ ಪ್ರತಿಭಟನೆ ಕೈಗೊಳ್ಳಲಾಗಿದ್ದು, ಈ ವೇಳೆ ಮಹಿಳೆಯರಿಬ್ಬರು ಕ್ರಿಮಿನಾಶಕ ಸೇವಿಸಿದ್ದಾರೆ.
ನಿರ್ಮಲಾ ಪಾಟೀಲ(32) ಅವರು ವಿಷ ಸೇವಿಸಿ ಮೃತಪಟ್ಟಿದ್ದಾರೆ. ಸರೋಜಮ್ಮ ಅವರನ್ನು ಗದಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಕಪ್ಪತಗುಡ್ಡ ವನ್ಯಜೀವಿ ಅರಣ್ಯ ಪ್ರದೇಶ ವ್ಯಾಪ್ತಿಯ ಜಮೀನಿನಲ್ಲಿ ಟ್ರೆಂಚ್ ಹಾಕಲು ಅರಣ್ಯ ಇಲಾಖೆಯಿಂದ ಗಡಿ ಗುರುತು ಮಾಡಲು ಮುಂದಾಗಿದ್ದು, ಈ ವೇಳೆ ವಿರೋಧ ವ್ಯಕ್ತಪಡಿಸಿದ ಮಹಿಳೆಯರು ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದ್ದಾರೆ.
ಹಲವು ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಜೀವನ ನಡೆಸುತ್ತಿದ್ದೇವೆ. ಜಮೀನು ಹಿಂಪಡೆಯಬಾರದು ಎಂದು ಮನವಿ ಮಾಡಿದ್ದಾರೆ. ಕಂದಾಯ ಇಲಾಖೆ ಜಮೀನು ಆಗಿದ್ದರೆ ಮಾತ್ರ ಬಗರ್ ಹುಕುಂ ಸಾಗುವಳಿ ವ್ಯಾಪ್ತಿಗೆ ಬರುತ್ತದೆ. ಅರಣ್ಯ ಇಲಾಖೆ ಸಂಬಂಧಿಸಿದ ಜಮೀನು ಇದಾಗಿದ್ದು, ಬಿಟ್ಟುಕೊಡಬೇಕೆಂದು ಅಧಿಕಾರಿಗಳು ಹೇಳಿದ್ದಾರೆ. ಇದರಿಂದ ಆತಂಕಗೊಂಡ ಮಹಿಳೆಯರು ವಿಷ ಸೇವಿಸಿದ್ದು, ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಫಲಿಸದೆ ನಿರ್ಮಲಾ ಮೃತಪಟ್ಟಿದ್ದಾರೆ. ಸ್ಥಳಕ್ಕೆ ತಾಶೀಲ್ದಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.