ಬೆಂಗಳೂರು: ಬಗರ್ ಹುಕುಂ ಅರ್ಜಿ ವಿಲೇವಾರಿ ವಿಚಾರದಲ್ಲಿ ನಿರ್ಲಕ್ಷ್ಯ ತೋರಿದ ಅಧಿಕಾರಿಗಳನ್ನು ಕಂದಾಯ ಸಚಿವ ಕೃಷ್ಣ ಬೈರೇಗೌಡ ತರಾಟೆಗೆ ತೆಗೆದುಕೊಂಡಿದ್ದಾರೆ.
ವಿಕಾಸಸೌಧದಲ್ಲಿ ಸೋಮವಾರ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವರು, ಸೆಪ್ಟಂಬರ್ ತಿಂಗಳಿನಿಂದ ಪೋಡಿ ಅಭಿಯಾನಕ್ಕೆ ಚಾಲನೆ ನೀಡಲಾಗುವುದು ಎಂದು ಹೇಳಿದ್ದಾರೆ.
ಸಾಗುವಳಿ ರೈತರಿಗೆ ಮಂಜೂರು ಮಾಡಿರುವ ಲಕ್ಷಾಂತರ ಪ್ರಕರಣಗಳಲ್ಲಿ ಅನೇಕ ವರ್ಷಗಳಿಂದ ಪೋಡಿ ದುರಸ್ತಿಯಾಗಿಲ್ಲ. ಅನೇಕ ಚರ್ಚೆ, ವಿವಿಧ ಪ್ರಯತ್ನಗಳಾಗಿದ್ದರೂ ಸಮಸ್ಯೆಗೆ ಸರಿಯಾದ ಪರಿಹಾರ ನೀಡಲು ಸಾಧ್ಯವಾಗಿಲ್ಲ. ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ.
ರೈತರಿಗೆ ಅವರ ಜಮೀನಿನ ಹಕ್ಕನ್ನು ಸಂಪೂರ್ಣವಾಗಿ ನೀಡುವ ವಿಚಾರದಲ್ಲಿ ಶಾಶ್ವತ ಪರಿಹಾರ ಕಲ್ಪಿಸಲು ಕಾಂಗ್ರೆಸ್ ಸರ್ಕಾರ ಸಂಕಲ್ಪ ಮಾಡಿದೆ. ಸೆಪ್ಟೆಂಬರ್ ತಿಂಗಳಿನಿಂದ ಪೋಡಿ ಅಭಿಯಾನಕ್ಕೆ ಚಾಲನೆ ನೀಡಲಾಗುವುದು. ಅರ್ಜಿ ವಿಲೇವಾರಿ ಮಾಡಲಾಗುವುದು ಎಂದು ಹೇಳಿದ್ದಾರೆ.