ಬೆಂಗಳೂರು: ಸೆಪ್ಟೆಂಬರ್ 2ರಿಂದ ಪೋಡಿ ದುರಸ್ತಿ ಅಭಿಯಾನ ಕೈಗೊಳ್ಳುವಂತೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇದರಿಂದಾಗಿ 10 ಲಕ್ಷ ರೈತರ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವ ನಿರೀಕ್ಷೆ ಇದೆ.
ವಿಕಾಸಸೌಧದಲ್ಲಿ ಶುಕ್ರವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲಾಧಿಕಾರಿಗಳು, ತಹಶೀಲ್ದಾರ್, ಮತ್ತಿತರ ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು, ರಾಜ್ಯಾದ್ಯಂತ ಅಭಿಯಾನ ಮಾದರಿಯಲ್ಲಿ ಸೆಪ್ಟೆಂಬರ್ 2 ರಿಂದ ನಮೂನೆ ಒಂದರಿಂದ ಐದರವರೆಗೆ ಪೋಡಿ ದುರಸ್ತಿ ನಿರ್ವಹಿಸಬೇಕು ಎಂದು ತಿಳಿಸಿದ್ದಾರೆ.
ಅಕ್ರಮ -ಸಕ್ರಮದಡಿ ಮಂಜೂರಾಗಿದ್ದರೂ, ದಶಕಗಳಿಂದ ಪೋಡಿ ದುರಸ್ತಿ ಬಾಕಿ ಇದ್ದು, ಲಕ್ಷಾಂತರ ರೈತರು ವರ್ಷಗಳಿಂದ ಪ್ರಯತ್ನಿಸುತ್ತಿದ್ದರೂ ಕೆಲವರ ಜಮೀನು ಮಾತ್ರ ಪೋಡಿ ದುರಸ್ತಿಯಾಗಿದೆ. ಇದರಿಂದ ಅನೇಕ ರೈತರು ತೊಂದರೆಗೊಳಗಾಗಿದ್ದಾರೆ. ಸೆಪ್ಟೆಂಬರ್ 2ರಿಂದ ಅಭಿಯಾನ ಮಾದರಿಯಲ್ಲಿ ಒಂದರಿಂದ ಐದು ನಮೂನೆ ಪೋಡಿ ದುರಸ್ತಿ ಕೆಲಸಕ್ಕೆ ಮುಂದಾಗಬೇಕು ಎಂದು ತಿಳಿಸಿದ್ದಾರೆ.
ಮಂಜೂರಾದ ಜಮೀನಿಗೆ ಪೋಡಿಯಾಗದ ಕಾರಣ ಆರ್.ಟಿ.ಸಿ.ಯೂ ಇಲ್ಲದಂತಾಗಿದ್ದು, ರೈತರಿಗೆ ತೊಂದರೆಯಾಗಿದೆ. ಕಚೇರಿಗಳಿಗೆ ಅಲೆದು ಸುಸ್ತಾಗಿದ್ದಾರೆ. ಮುಖ್ಯಮಂತ್ರಿಗಳ ಸೂಚನೆಯಂತೆ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಕ್ರಮ ವಹಿಸಲಾಗಿದೆ. ಸಮಸ್ಯೆ ಮುಕ್ತ ಪೋಡಿ ದುರಸ್ತಿಗೆ ನಮೂನೆ ಒಂದರಿಂದ ಐದರ ಕಡತಗಳನ್ನು ಡಿಜಿಟಲ್ ಕಡತಗಳನ್ನಾಗಿ ತಯಾರಿಸಲಾಗುತ್ತದೆ. ಡಿಜಿಟಲ್ ಆ್ಯಪ್ ನಿಂದ ಸರಳ ವೇಗ ಮತ್ತು ಪಾರದರ್ಶಕವಾಗಿ ಮೂಲ ಮಂಜೂರಿ ದಾಖಲೆ ಸುರಕ್ಷಿತವಾಗಿಡಬಹುದು ಎಂದು ಹೇಳಲಾಗಿದೆ.