ನೇಣು ಬಿಗಿದ ಸ್ಥಿತಿಯಲ್ಲಿ ನ್ಯಾಯಾಧೀಶರೊಬ್ಬರ ಮೃತದೇಹ ಪತ್ತೆಯಾಗಿರುವ ಘಟನೆ ಒಡಿಸ್ಸಾದ ಕಟಕ್ ನಲ್ಲಿ ನಡೆದಿದೆ. ಪೋಕ್ಸೋ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸುಭಾಷ್ ಕುಮಾರ್ ಬಿಹಾರಿ ಮೃತಪಟ್ಟವರಾಗಿದ್ದಾರೆ.
ನ್ಯಾಯಾಧೀಶರ ಅಧಿಕೃತ ನಿವಾಸದಲ್ಲಿ ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದ ಸ್ಥಿತಿಯಲ್ಲಿ ಸುಭಾಷ್ ಕುಮಾರ್ ಬಿಹಾರಿ ಅವರ ಮೃತ ದೇಹ ಪತ್ತೆಯಾಗಿದ್ದು, ಈ ಸಂದರ್ಭದಲ್ಲಿ ಕುಟುಂಬ ಸದಸ್ಯರು ಮನೆಯಲ್ಲಿ ಇರಲಿಲ್ಲವೆಂದು ಹೇಳಲಾಗಿದೆ.
ಕಳೆದೆರಡು ದಿನಗಳಿಂದ ನ್ಯಾಯಾಧೀಶರು ರಜೆಯಲ್ಲಿದ್ದು, ಘಟನೆ ನಡೆದ ದಿನ ಅವರ ಪತ್ನಿ ಹೊರಗೆ ಹೋಗಿದ್ದರೆ ಮಕ್ಕಳು ಶಾಲೆಗೆ ತೆರಳಿದ್ದರು. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿರುವ ಪೊಲೀಸರು ಇದು ಆತ್ಮಹತ್ಯೆ ಪ್ರಕರಣ ಇರಬಹುದು ಎಂದು ಶಂಕಿಸಿದ್ದಾರೆ.