ನವದೆಹಲಿ: ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಆರೋಪಿ ಹಾಗೂ ಸಂತ್ರಸ್ತರ ನಡುವೆ ಇತ್ಯರ್ಥ ಮಾಡಿಕೊಳ್ಳಲಾಗಿದೆ ಎಂಬ ಆಧಾರದ ಮೇಲೆ ಪೋಕ್ಸೋ ಕಾಯ್ದೆಯಡಿಯಲ್ಲಿ ದಾಖಲಾದ ಪ್ರಕರಣಗಳನ್ನು ರದ್ದುಪಡಿಸಲಾಗದು ಎಂದು ಅಭಿಪ್ರಾಯ ಪಟ್ಟಿದೆ.
14 ವರ್ಷದ ಬಾಲಕಿ ಮೇಲೆ 25 ವರ್ಷದ ವ್ಯಕ್ತಿಯಿಂದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯ ಆರೋಪಿಗೆ ಶಿಕ್ಷೆ ವಿಧಿಸಿತ್ತು. ಈ ಶಿಕ್ಷೆಯನ್ನು ಕೋಲ್ಕತ್ತಾ ಹೈಕೋರ್ಟ್ ರದ್ದುಗೊಳಿಸಿತ್ತು. ಈ ಕುರಿತಂತೆ ಸುಮೊಟೊ ಪ್ರಕರಣ ದಾಖಲಿಸಿಕೊಂಡಿದ್ದ ಸುಪ್ರೀಂ ಕೋರ್ಟ್, ಹೈಕೋರ್ಟ್ ಆದೇಶವನ್ನು ರದ್ದುಪಡಿಸಿದೆ.
ಆರೋಪಿ ಹಾಗೂ ಸಂತ್ರಸ್ತೆ ನಡುವೆ ಸೆಟಲ್ ಮೆಂಟ್ ಆಗಿದೆ ಅಥವಾ ಪ್ರಕರಣ ಇತ್ಯರ್ಥಪಡಿಸಿಕೊಂಡಿದ್ದಾರೆ ಎಂಬ ಆಧಾರದ ಮೇಲೆ ಪೋಕ್ಸೋ ಪ್ರಕರಣವನ್ನು ರಡ್ಡುಪಡಿಸಲಾಗದು ಎಂದು ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿಗಳಾದ ಅಭ್ಯಯ್ ಶ್ರೀನಿವಾಸ್ ಓಕ ಹಾಗೂ ನ್ಯಾ.ಉಜ್ಜಲ್ ಭುಯಾನ್ ಅವರಿದ್ದ ಪೀಠ ಸ್ಪಷ್ಟಪಡಿಸಿದೆ.
ಅಲ್ಲದೇ ನ್ಯಾಯಾಲಯಗಳು ಕಾನೂನು ರೀತಿಯಲ್ಲಿ ನ್ಯಾಯದಾನ ಮಾಡಬೇಕೆ ಹೊರತು ಕಾನೂನಿಗೆ ವಿರುದ್ಧವಾಗಿ ವರ್ತಿಸಬಾರದು. ಈ ಪ್ರಕರಣದಲ್ಲಿ ಆರೋಪಿ 25 ವರ್ಷದ ವ್ಯಕ್ತಿಯಾಗಿದ್ದರೆ ಸಂತ್ರಸ್ತೆ 14 ವರ್ಷದ ಬಾಲಕಿ ಎಂಬ ಅಂಶವನ್ನು ಹೈಕೋರ್ಟ್ ಪರಿಗಣಿಸಿಲ್ಲ. ಆರೋಪಿಯಿಂದ ಸಂತ್ರಸ್ತೆಗೆ ಮಗುವಾಗಿದೆ ಹಾಗೂ ಆಕೆ ಆತನೊಂದಿಗೆ ಇದ್ದಾಳೆ ಎಂಬ ಕಾರಣಕ್ಕೆ ಪ್ರಕರಣ ರದ್ದುಪಡಿಸುವ ಕ್ರಮ ಕಾನೂನುಬದ್ಧವಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.
ವಿಚಾರಣಾಧೀನ ನ್ಯಾಯಾಲಯ ನೀಡಿರುವ ತೀರ್ಪನ್ನು ಖಾಯಂಗೊಳಿಸಿದ ಸುಪ್ರೀಮ್ ಕೋರ್ಟ್, ಮಕ್ಕಳ ಹಕ್ಕುಗಳ ರಕ್ಷೆ ಹಾಗೂ ಅಂತರಾಷ್ಟ್ರೀಯ ಒಪ್ಪಂದಗಳಿಗೆ ಅನುಗುಣವಾಗಿ ಪೋಕ್ಸೋ ಕಾಯ್ದೆ ಜಾರಿ ಮಾಡಲಾಗಿದೆ. 14 ವರ್ಷದ ಬಾಲಕಿ ಮೇಲೆ 25 ವರ್ಷದ ವ್ಯಕ್ತಿ ಲೈಂಗಿಕ ದೌರ್ಜನ್ಯವೆಸಗಿದಾಗ ಅದು ಶೋಷಣೆಯಲ್ಲದೇ ಲೈಂಗಿಕತೆ ಎಂದು ಪರಿಗಣಿಸಲು ಸಾಧ್ಯವಿಲ್ಲ. 18 ವರ್ಷದೊಳಗಿನ ಬಾಲಕಿ ಒಪ್ಪಿಗೆ ನೀಡಿದರೂ ಅದು ಪರಿಗಣನಾರ್ಹವಲ್ಲ ಎಂದು ಕಾನೂನಿನಲ್ಲಿದೆ. ಹಾಗಿದ್ದ ಮೇಲೆ ಅಂತಹ ಕೃತ್ಯವನ್ನು ಶೋಷಣೆಯಲ್ಲದೇ ಪ್ರಣಯ ಸಂಬಂಧ ಎಂದು ಪರಿಗಣಿಸಲಾಗದು ಸ್ಪಷ್ಟಪಡಿಸಿದೆ.
ಸಂತ್ರಸ್ತೆ ಹಾಗೂ ಮಗುವಿನ ಭವಿಷ್ಯ ಸರ್ಕಾರದ ಜವಾಬ್ದಾರಿ. ಆಕೆ ತನ್ನ ಭವಿಷ್ಯದ ಬಗ್ಗೆ ಸೂಕ್ತ ನಿರ್ಣಯಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಸಹಾಯ ಮಾಡಲು ಕ್ಲಿನಿಕಲ್ ಸೈಕಲಾಜಿಸ್ಟ್ ಸೇರಿದಂತೆ ಮೂವರು ತಜ್ಞರ ಸಚಿತಿ ರಚಿಸಬೇಕು. ಸಂತ್ರಸ್ತೆ ಹಾಗೂ ಮಗುವಿನ ಭವಿಷ್ಯಕ್ಕೆ ಸಂಬಂಧಿಸಿದಂತೆ ಸರ್ಕಾರ ನೀಡುವ ನೆರವನ್ನು ಈ ಸಮಿತಿ ಪರಿಶೀಲಿಸಬೇಕು. ಈ ಬಗ್ಗೆ ಕೈಗೊಂಡ ವರದಿಯನ್ನು 2024ರ ಅಕ್ಟೋಬರ್ 18ರೊಳಗೆ ಸಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್ ಪಶ್ಚಿಮ ಬಂಗಾಳ ಸರ್ಕಾರಕ್ಕೆ ನಿರ್ದೇಶನ ನೀಡಿದೆ.