ಬೆಂಗಳೂರು: ರಾಜ್ಯದ ನಗರ ಪ್ರದೇಶಗಳಲ್ಲಿ ಕೊಳವೆ ಮಾರ್ಗದ ಮೂಲಕ ನೈಸರ್ಗಿಕ ಅಡುಗೆ ಅನಿಲ(PNG) ಪೂರೈಕೆ ಉತ್ತೇಜಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ರೂಪಿಸಿದ ನಗರ ಅನಿಲ ವಿತರಣಾ ನೀತಿ(CGD)ಗೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ. ಸಂಪುಟ ಸಭೆಯ ಬಳಿಕ ಸಚಿವ ಹೆಚ್.ಕೆ. ಪಾಟೀಲ್ ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ ಗೃಹಬಳಕೆ ಹಾಗೂ ವಾಣಿಜ್ಯ ಕೈಗಾರಿಕೆಯಲ್ಲಿ ಕೊಳವೆ ಮಾರ್ಗದ ಮೂಲಕ ಪೂರೈಕೆಯಾಗುವ PNG ಹಾಗೂ CNG ಅನಿಲ ಬಳಕೆ ಉತ್ತೇಜಿಸಲು ರಾಜ್ಯದಲ್ಲಿ ಪ್ರತ್ಯೇಕ ನೀತಿ ರೂಪಿಸಲಾಗಿದೆ.
ಈ ನೀತಿಯು ಹಸಿರು ಅನಿಲ ಬಳಕೆಗೆ ಪ್ರೋತ್ಸಾಹ ನೀಡಲಿದೆ. ನಗರಗಳಲ್ಲಿ ಅನಿಲ ಪೂರೈಕೆಗೆ ಅಗತ್ಯವಿರುವ ಮೂಲಸೌಕರ್ಯ ಕಲ್ಪಿಸಲು ಮತ್ತು ಅನಿಯಮಿತ ವ್ಯವಸ್ಥೆ ರೂಪಿಸಲು, ಯಾವುದಾದರೂ ಅವಘಡವಾದರೆ ಯಾರನ್ನು ಹೊಣೆಗಾರಿಕೆ ಮಾಡಬೇಕು ಎಂಬ ಹಲವು ಅಂಶಗಳನ್ನು ನೀತಿಯಲ್ಲಿ ಅಳವಡಿಸಲಾಗಿದೆ. ಕೊಳವೆ ಮೂಲಕ ಗ್ಯಾಸ್ ಪೂರೈಕೆ ಮಾಡುವ ಸೇವೆಯನ್ನು ಗೆಲ್ ಸಂಸ್ಥೆ ನೀಡುತ್ತಿದೆ. ನಗರ ಪ್ರದೇಶಗಳಲ್ಲಿ ಕೊಳವೆ ಮಾರ್ಗದ ಮೂಲಕ ನೈಸರ್ಗಿಕ ಅಡುಗೆ ಅನಿಲ ಉತ್ತೇಜನಕ್ಕೆ ರೂಪಿಸಿದ ನಗರ ಅನಿಲ ವಿತರಣಾ ನೀತಿಗೆ ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದು ಹೆಚ್.ಕೆ. ಪಾಟೀಲ್ ತಿಳಿಸಿದ್ದಾರೆ.