ಒಡಿಶಾ ರೈಲು ಅಪಘಾತ ಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದಾರೆ. ಕಟಕ್
ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮೂರು ರೈಲುಗಳ ಡಿಕ್ಕಿ ಪ್ರಕರಣದಲ್ಲಿ ಇದುವರೆಗೂ ರಕ್ಷಣೆ, ಚಿಕಿತ್ಸೆ ಮತ್ತು ಇತರ ವಿಷಯಗಳ ಬಗ್ಗೆ ಪ್ರಧಾನಿ ಮೋದಿ ಚರ್ಚಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಒಡಿಶಾದ ಬಾಲಸೋರ್ನಲ್ಲಿ ಮೂರು ರೈಲುಗಳ ಭೀಕರ ಡಿಕ್ಕಿಯಲ್ಲಿ ಕನಿಷ್ಠ 238 ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 900 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದು 20 ವರ್ಷಗಳಿಗಿಂತಲೂ ಹೆಚ್ಚು ಅವಧಿಯಲ್ಲಿ ದೇಶದ ಅತ್ಯಂತ ಭೀಕರ ರೈಲು ಅಪಘಾತವಾಗಿದೆ. ರೈಲು ದುರಂತದ ಕುರಿತು ತನಿಖೆ ನಡೆಸಲು ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗುವುದು ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಅಪಘಾತದಲ್ಲಿ ಬೆಂಗಳೂರು-ಹೌರಾ ಸೂಪರ್ಫಾಸ್ಟ್ ಎಕ್ಸ್ ಪ್ರೆಸ್, ಶಾಲಿಮಾರ್-ಚೆನ್ನೈ ಸೆಂಟ್ರಲ್ ಕೋರಮಂಡಲ್ ಎಕ್ಸ್ ಪ್ರೆಸ್ ಮತ್ತು ಗೂಡ್ಸ್ ರೈಲು ಸೇರಿವೆ.
ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಸಮೀಪದ ಜಿಲ್ಲೆಗಳ ಎಲ್ಲಾ ಆಸ್ಪತ್ರೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಮೂರು ಎನ್ಡಿಆರ್ಎಫ್ ಘಟಕಗಳು, 4 ಒಡಿಶಾ ವಿಪತ್ತು ಕ್ಷಿಪ್ರ ಕಾರ್ಯಾಚರಣೆ ಪಡೆಗಳು, 15 ಕ್ಕೂ ಹೆಚ್ಚು ಅಗ್ನಿಶಾಮಕ ರಕ್ಷಣಾ ತಂಡಗಳು, 30 ವೈದ್ಯರು, 200 ಪೊಲೀಸ್ ಸಿಬ್ಬಂದಿ ಮತ್ತು 60 ಆಂಬ್ಯುಲೆನ್ಸ್ ಗಳನ್ನು ಸ್ಥಳಕ್ಕೆ ಸಜ್ಜುಗೊಳಿಸಲಾಗಿದೆ ಎಂದು ಒಡಿಶಾ ಮುಖ್ಯ ಕಾರ್ಯದರ್ಶಿ ಪ್ರದೀಪ್ ತಿಳಿಸಿದ್ದಾರೆ.
ಭೀಕರ ರೈಲು ದುರಂತದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಒಂದು ದಿನದ ಶೋಕಾಚರಣೆಯನ್ನು ಘೋಷಿಸಿದ್ದಾರೆ. ರೈಲ್ವೆ ಸಚಿವರು ಇಂದು ಬೆಳಗ್ಗೆ ಅಪಘಾತ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.
ಅಪಘಾತದಲ್ಲಿ ಮೃತಪಟ್ಟವರಿಗೆ ತಲಾ 10 ಲಕ್ಷ ರೂ., ಗಂಭೀರವಾಗಿ ಗಾಯಗೊಂಡವರಿಗೆ 2 ಲಕ್ಷ ರೂ. ಮತ್ತು ಸಣ್ಣಪುಟ್ಟ ಗಾಯಗಳಾದವರಿಗೆ 50,000 ರೂ. ಪರಿಹಾರ ನೀಡುವುದಾಗಿ ಅಶ್ವಿನಿ ವೈಷ್ಣವ್ ಘೋಷಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅಪಘಾತದ ಬಗ್ಗೆ ತಮ್ಮ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಮತ್ತು ಗಾಯಗೊಂಡವರಿಗೆ ತಲಾ 50,000 ರೂ.ಗಳನ್ನು ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ (PMNRF) ಪರಿಹಾರವನ್ನು ಘೋಷಿಸಿದ್ದಾರೆ.
ನಿನ್ನೆ ಸಂಜೆ 7 ಗಂಟೆಗೆ ಬಾಲಸೋರ್ನಲ್ಲಿ ರೈಲಿನ ಒಂದು ಬೋಗಿ ಹಳಿತಪ್ಪಿದ ನಂತರ ಮೂರು ರೈಲುಗಳು ಡಿಕ್ಕಿ ಹೊಡೆದವು.