ಪಂಜಾಬ್ ನಲ್ಲಿ ಉಂಟಾದ ಪ್ರಧಾನಿ ಮೋದಿಯವರ ಭದ್ರತಾ ಲೋಪಕ್ಕೆ ಪಂಜಾಬ್ ಮುಖ್ಯಮಂತ್ರಿ ಪ್ರತಿಕ್ರಿಯಿಸಿದ್ದಾರೆ. ಘಟನೆ ಬಗ್ಗೆ ಮಾತನಾಡಿರುವ ಅವರು ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಭದ್ರತಾ ಲೋಪವಾಗಲಿ ಅಥವಾ ದಾಳಿಗೆ ಯಾವುದೇ ಪ್ರಯತ್ನವಾಗಲಿ ನಡೆದಿಲ್ಲ ಎಂದಿದ್ದಾರೆ.
ಪ್ರಧಾನಿ ಮೋದಿಯವರು ಪ್ರಯಾಣಿಸುತ್ತಿದ್ದ ಮಾರ್ಗದಲ್ಲಿ ನಡೆದ ಪ್ರತಿಭಟನೆಯನ್ನ ಶಾಂತಿಯುತ ಹೋರಾಟ ಎಂದು ಕರೆದಿರುವ ಸಿಎಂ ಚನ್ನಿ ಪ್ರತಿಭಟನೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಕಳೆದ ಒಂದು ವರ್ಷದಿಂದ ರೈತರು ಶಾಂತಿಯುತವಾಗಿ ಧರಣಿ ನಡೆಸುತ್ತಿದ್ದಾರೆ. ನಾನು ರೈತರ ಮೇಲೆ ಲಾಠಿ ಚಾರ್ಜ್ ಮಾಡಲು ಹೋಗುವುದಿಲ್ಲ, ನಾವು ನಿನ್ನೆ ರಾತ್ರಿ ಇಡೀ ರೈತರೊಂದಿಗೆ ಮಾತನಾಡಿದ್ದೇವೆ, ನಂತರ ಅವರು ತಮ್ಮ ಆಂದೋಲನವನ್ನು ಕೊನೆಗೊಳಿಸಿದ್ದೇವೆ ಎಂದು ಹೋರಾಟವನ್ನ ಹಿಂಪಡೆದಿದ್ದರೆ. ಆದರೆ ಇಂದು ಇದ್ದಕ್ಕಿದ್ದಂತೆ ಕೆಲವು ಚಳವಳಿಗಾರರು ಫಿರೋಜ್‌ಪುರ ಜಿಲ್ಲೆಯಲ್ಲಿ ಜಮಾಯಿಸಿದ್ದಾರೆ. ಇದರಿಂದ ಪ್ರಧಾನಿ ಮೋದಿ ಅವರ ಭೇಟಿಯ ಸಮಯದಲ್ಲಿ ಯಾವುದೇ ಭದ್ರತಾ ಲೋಪಗಳಾಗಿಲ್ಲ. ಒಂದು ವೇಳೆ ಭದ್ರತಾ ಲೋಪವಾಗಿದ್ದರೆ ತನಿಖೆ ನಡೆಸುತ್ತೇವೆ ಎಂದು ಸಿಎಂ ಚನ್ನಿ ಹೇಳಿದ್ದಾರೆ.
ಪಿಎಂ ಮೋದಿ ಅವರನ್ನು ನಾನು ಸ್ವಾಗತಿಸಬೇಕಾಗಿತ್ತು. ಆದರೆ, ನಮ್ಮ ಇಲಾಖೆಯ ಕೆಲವು ಅಧಿಕಾರಿಗಳಲ್ಲಿ ಕೊರೋನಾ ಸೋಂಕು ಪತ್ತೆಯಾಗಿದ್ದರಿಂದ, ಮುಂಜಾಗ್ರತಾ ಕ್ರಮವಾಗಿ ನಾನು ಹೋಗಲಿಲ್ಲ. ಪ್ರಧಾನಿ ಮೋದಿ ಅವರನ್ನು ಬರಮಾಡಿಕೊಳ್ಳುವ ಜವಾಬ್ದಾರಿಯನ್ನು ಹಣಕಾಸು ಸಚಿವ ಮನ್‌ಪ್ರೀತ್ ಬಾದಲ್ ಮತ್ತು ಉಪ ಮುಖ್ಯಮಂತ್ರಿಗೆ ವಹಿಸಿದ್ದೆ ಎಂದು ಸಿಎಂ ಚನ್ನಿ ಹೇಳಿದ್ದಾರೆ.