ನವದೆಹಲಿ: ಭಾರತ ವಿರುದ್ಧ ಭಯೋತ್ಪಾದಕ ದಾಳಿ ಬೆಂಬಲಿಸುವ ದೇಶಗಳು ತಮ್ಮನ್ನೇ ಉಳಿಸಿಕೊಳ್ಳಲು ಜಗತ್ತಿಗೆ ಮನವಿ ಮಾಡ್ತಿವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಹಿಂದೂಸ್ತಾನ್ ಟೈಮ್ಸ್ ಲೀಡರ್‌ಶಿಪ್ ಶೃಂಗಸಭೆ 2023 ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಭಾರತದ ವಿರುದ್ಧದ ಭಯೋತ್ಪಾದಕ ದಾಳಿಯನ್ನು ಬೆಂಬಲಿಸುವ ದೇಶಗಳು ಈಗ ಅವುಗಳನ್ನು ಉಳಿಸಲು ಜಗತ್ತಿಗೆ ಮನವಿ ಮಾಡುತ್ತಿವೆ ಎಂದು ಪಾಕಿಸ್ತಾನವನ್ನು ಹೆಸರಿಸದೆ ಹೇಳಿದರು.
ಸ್ವಾತಂತ್ರ್ಯ ಬಂದಾಗಿನಿಂದ 2014ರವರೆಗೆ ಭಾರತ ಮಾನಸಿಕ ಅಡೆತಡೆಗಳಿಗೆ ಬಲಿಯಾಗಿದೆ. ಈ ಅಡೆತಡೆಗಳಿಂದಾಗಿ ಭಾರತವು ಸ್ವಾತಂತ್ರ್ಯದ ನಂತರ ಹೊಂದಬೇಕಾದ ಬೆಳವಣಿಗೆಯನ್ನು ಸಾಧಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದರು.
ಭಾರತವು ಪ್ರತಿಯೊಂದು ಅಡೆತಡೆಗಳನ್ನು ಮುರಿದು ಚಂದ್ರನ ಮೇಲ್ಮೈಯಲ್ಲಿ ಯಾರೂ ತಲುಪದ ಆ ಭಾಗದಲ್ಲಿ ಇಳಿದಿದೆ. ಭಾರತವು ಮೊಬೈಲ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ. ಭಾರತವು ಸ್ಟಾರ್ಟ್-ಅಪ್‌ಗಳಲ್ಲಿ ಮೊದಲ ಮೂರು ಸ್ಥಾನದಲ್ಲಿದೆ ಎಂದು ಹೇಳಿದರು.
ಬಡತನವನ್ನು ಕೇವಲ ಘೋಷಣೆಗಳಿಂದ ಸೋಲಿಸಲು ಸಾಧ್ಯವಿಲ್ಲ ಆದರೆ ಪರಿಹಾರದ ಮೂಲಕ ಹೋರಾಡಬಹುದು. ಭಾರತವು 2014 ರಿಂದ ಮಾನಸಿಕ ಅಡೆತಡೆಗಳನ್ನು ಮುರಿಯುತ್ತಿದೆ. ದೀರ್ಘಕಾಲದವರೆಗೆ ನಾವು ಹಲವಾರು ಅಡೆತಡೆಗಳನ್ನು ಎದುರಿಸಬೇಕಾಯಿತು. ದಾಳಿಗಳು ಮತ್ತು ವಸಾಹತುಶಾಹಿ ನಮ್ಮನ್ನು ತಡೆಗೋಡೆಗಳಲ್ಲಿ ಕಟ್ಟಿಹಾಕಿತು. ಸ್ವಾತಂತ್ರ್ಯ ಚಳುವಳಿಯು ಹಲವಾರು ಅಡೆತಡೆಗಳನ್ನು ಮುರಿದಿದೆ ಎಂದು ತಿಳಿಸಿದ್ದಾರೆ.
ತಮ್ಮ ಸರ್ಕಾರದ ಜನ್ ಧನ್ ಖಾತೆ ಯೋಜನೆ ಬಗ್ಗೆ ಹಲವರು ಅನುಮಾನ ವ್ಯಕ್ತಪಡಿಸಿದರು. ಆದಾಗ್ಯೂ, ಬ್ಯಾಂಕ್ ಗಳು ಶ್ರೀಮಂತರಿಗಾಗಿ ಮಾತ್ರ ಎಂದು ಭಾವಿಸುತ್ತಿದ್ದ ಬಡ ಜನರಲ್ಲಿ ಹೊಸ ಆತ್ಮವಿಶ್ವಾಸವನ್ನು ತುಂಬುವಲ್ಲಿ ಈ ಯೋಜನೆ ಯಶಸ್ವಿಯಾಗಿದೆ. ಎಸಿ ಕೊಠಡಿಗಳಲ್ಲಿ ವಾಸಿಸುವ ಜನರು ಬಡವರ ಮಾನಸಿಕ ಸಬಲೀಕರಣವನ್ನು ಎಂದಿಗೂ ಅರ್ಥಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿಯನ್ನು ರದ್ದುಗೊಳಿಸುವ ತಮ್ಮ ಸರ್ಕಾರದ ಕ್ರಮವನ್ನು ಪ್ರಧಾನಿ ಮೋದಿ ಶ್ಲಾಘಿಸಿ ಮಹತ್ವದ ನಡೆಯಿಂದ ಕಣಿವೆಯಲ್ಲಿ ಭಯೋತ್ಪಾದನೆ ಅಧೋಗತಿಯಲ್ಲಿ ಸಾಗುತ್ತಿದೆ. ಆರ್ಟಿಕಲ್ 370 ರ ರದ್ದತಿಯ ನಂತರ, ಭಯೋತ್ಪಾದನೆ ಕೊನೆಗೊಳ್ಳುತ್ತಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರವಾಸೋದ್ಯಮ ಹೆಚ್ಚುತ್ತಿದೆ ಎಂದು ಅವರು ಹೇಳಿದ್ದಾರೆ.