ನವದೆಹಲಿ: ವಿಪಕ್ಷದವರು ಕೇವಲ ಪಕ್ಷದ ಬಗ್ಗೆ ಯೋಚಿಸುತ್ತಿದ್ದಾರೆ, ದೇಶದ ಬಗ್ಗೆ ಯೋಚಿಸುತ್ತಿಲ್ಲ. ದೇಶಕ್ಕೆ ಜೈಕಾರ ಹಾಕುವುದನ್ನು ಇವರು ಸಹಿಸುತ್ತಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.
ಲೋಕಸಭೆಯಲ್ಲಿ ವಿಪಕ್ಷಗಳ ಅವಿಶ್ವಾಸ ನಿರ್ಣಯಕ್ಕೆ ಉತ್ತರಿಸಿದ ಪ್ರಧಾನಿ ಮೋದಿ, ದೇಶದ ನಾಲ್ಕು ದಿಕ್ಕುಗಳಲ್ಲೂ ದೇಶದ ಬಗ್ಗೆ ಜೈಕಾರ ಹಾಕುತ್ತಿದ್ದಾರೆ. ಆದರೆ ವಿಪಕ್ಷ ಸದಸ್ಯರು ಕಪ್ಪು ಬಟ್ಟೆ ಧರಿಸಿ ಸಂಸತ್ ಗೆ ಆಗಮಿಸಿದ್ದಾರೆ. ಇವರಿಗೆ ದೇಶದ ಬಗ್ಗೆ ಚಿಂತೆ ಇಲ್ಲ, ಬರಿ ಪಕ್ಷದ ಬಗ್ಗೆ ಮಾತ್ರ ಚಿಂತೆ ಎಂದು ಕಿಡಿ ಕಾರಿದರು.
ಭಾರತ ಅಭಿವೃದ್ಧಿಯಾಗುತ್ತಿರುವುದನ್ನು ವಿದೇಶದಲ್ಲಿ ಕುಳಿತು ನೋಡುತ್ತಿದ್ದಾರೆ. ಆದರೆ ಭಾರತದೊಳಗೆ ಇರುವ ಕೆಲವರಿಗೆ ಕಾಣುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು. ಅವಿಶ್ವಾಸ ಎನ್ನುವುದು ವಿಪಕ್ಷಗಳ ರಕ್ತದ ಕಣದಲ್ಲಿದೆ. ಜನರು ನೀಡಿರುವ ವಿಶ್ವಾಸವನ್ನು ವಿಪಕ್ಷಗಳು ನಂಬಲ್ಲ. ಜನರನ್ನು ಬೇರೆ ದಿಕ್ಕಿನತ್ತ ಕೊಂಡೊಯ್ಯುವುದು ಇವರ ಕೆಲಸ ಎಂದು ಗುಡುಗಿದರು.