ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪ್ರಚಾರ ರಂಗೇರುತ್ತಿದೆ. ಚುನಾವಣೆ ರ್ಯಾಲಿ ನಡೆಸುತ್ತಿರುವ ರಾಜಕೀಯ ದಿಗ್ಗಜರು ಮತದಾರರ ಮನವೊಲಿಸಲು ಯತ್ನಿಸುತ್ತಿದ್ದಾರೆ. ಇಂದು ಪ್ರಧಾನಿ ನರೇಂದ್ರ ಮೋದಿ, ಕಾಂತಿಯಲ್ಲಿ ಚುನಾವಣಾ ರ್ಯಾಲಿ ನಡೆಸಿದ್ದಾರೆ. ಈ ವೇಳೆ ವೇದಿಕೆಯಲ್ಲಿ ನಡೆದ ಘಟನೆಯೊಂದು ಎಲ್ಲರ ಗಮನ ಸೆಳೆದಿದೆ.
ವೇದಿಕೆಯಲ್ಲಿದ್ದ ಬಿಜೆಪಿ ಕಾರ್ಯಕರ್ತರೊಬ್ಬರು ಪ್ರಧಾನಿ ನರೇಂದ್ರ ಮೋದಿಯವರ ಪಾದಗಳನ್ನು ಮುಟ್ಟಿ ನಮಸ್ಕರಿಸಿದ್ದಾರೆ. ಈ ವೇಳೆ ಕಾರ್ಯಕರ್ತರ ಪಾದ ಮುಟ್ಟಿ ಮೋದಿ ಕೂಡ ನಮಸ್ಕರಿಸಿದ್ದಾರೆ. ಈ ವಿಡಿಯೋವನ್ನು ಬಿಜೆಪಿ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
ಬಿಜೆಪಿ ಒಂದು ಸುಸಂಸ್ಕೃತ ಸಂಘಟನೆಯಾಗಿದ್ದು, ಅಲ್ಲಿ ಕಾರ್ಯಕರ್ತರು ಪರಸ್ಪರ ಸಮಾನ ಅಧಿಕಾರ ಹೊಂದಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ನಡೆದ ಚುನಾವಣಾ ರ್ಯಾಲಿಯ ಸಂದರ್ಭದಲ್ಲಿ ವೇದಿಕೆಯಲ್ಲಿ, ಬಿಜೆಪಿ ಕಾರ್ಯಕರ್ತರೊಬ್ಬರು ಮೋದಿ ಪಾದ ಸ್ಪರ್ಶಿಸಿದಾಗ ಪಿಎಂ ನರೇಂದ್ರ ಮೋದಿಯವರು ಸಹ ಕಾರ್ಯಕರ್ತರ ಪಾದ ಮುಟ್ಟಿ ನಮಸ್ಕರಿಸಿದರು ಎಂದು ಟ್ವೀಟ್ ಮಾಡಲಾಗಿದೆ.
ಪಶ್ಚಿಮ ಬಂಗಾಳದ 294 ವಿಧಾನಸಭಾ ಸೀಟುಗಳಿಗೆ ಎಂಟು ಹಂತದಲ್ಲಿ ಚುನಾವಣೆ ನಡೆಯಲಿದೆ. ಮಾರ್ಚ್ 27ರಿಂದ ಏಪ್ರಿಲ್ 29 ನಡುವೆ ಎಂಟು ಹಂತಗಳಲ್ಲಿ ಮತದಾನ ನಡೆಯಲಿದೆ. ಮೇ 2 ರಂದು ಮತ ಎಣಿಕೆ ನಡೆಯಲಿದೆ.