ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮಹಾರಾಷ್ಟ್ರದ ಪುಣೆಗೆ ಒಂದು ದಿನದ ಭೇಟಿ ನೀಡಲಿದ್ದಾರೆ.
ಅವರು ಪುಣೆ ಮೆಟ್ರೋ ಹಂತ I ರ ಎರಡು ಕಾರಿಡಾರ್‌ಗಳ ಪೂರ್ಣಗೊಂಡ ವಿಭಾಗಗಳ ಸೇವೆಗಳ ಉದ್ಘಾಟನೆ ಮಾಡಿ ಮೆಟ್ರೋ ರೈಲುಗಳಿಗೆ ಫ್ಲ್ಯಾಗ್ ಆಫ್ ಮಾಡಲಿದ್ದಾರೆ. 2016 ರಲ್ಲಿ ಸ್ವತಃ ಪ್ರಧಾನ ಮಂತ್ರಿಯವರು ಅಡಿಪಾಯ ಹಾಕಿದ ಪುಣೆ ಮೆಟ್ರೋದ ಎರಡು ಕಾರಿಡಾರ್‌ಗಳ ಪೂರ್ಣಗೊಂಡ ವಿಭಾಗಗಳಲ್ಲಿ ಸೇವೆಗಳ ಉದ್ಘಾಟನೆ ನೆರವೇರಿಸಲಿದ್ದಾರೆ.
ಪುಣೆ ಭೇಟಿ ವೇಳೆ ಮೋದಿ ಅವರಿಗೆ ಲೋಕಮಾನ್ಯ ತಿಲಕ್ ರಾಷ್ಟ್ರೀಯ ಪ್ರಶಸ್ತಿ ನೀಡಲಾಗುತ್ತದೆ. ದಗ್ದುಶೇತ್ ಮಂದಿರದಲ್ಲಿ ದರ್ಶನ ಮತ್ತು ಪೂಜೆ ನೆರವೇರಿಸುವ ಮೂಲಕ ಪ್ರಧಾನಿಯವರು ತಮ್ಮ ಪುಣೆ ಭೇಟಿಯನ್ನು ಆರಂಭಿಸಲಿದ್ದಾರೆ.
ತಿಲಕ ಸ್ಮಾರಕ ಮಂದಿರ ಟ್ರಸ್ಟ್‌ನ ಅಧ್ಯಕ್ಷ ದೀಪಕ್ ತಿಲಕ್ ಅವರಿಂದ ಲೋಕಮಾನ್ಯ ತಿಲಕ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ದೇಶದ ಪ್ರಗತಿಗೆ ನೀಡಿದ ಅತ್ಯುತ್ತಮ ಕೊಡುಗೆಗಳಿಗಾಗಿ ಮೋದಿ ಅವರಿಗೆ ಪ್ರಶಸ್ತಿ ನೀಡಲಾಗುವುದು.
ಈ ಪ್ರಶಸ್ತಿಯನ್ನು 1983 ರಲ್ಲಿ ತಿಲಕ್ ಸ್ಮಾರಕ ಮಂದಿರ ಟ್ರಸ್ಟ್ ಸ್ಥಾಪಿಸಿತು ಮತ್ತು ಪ್ರತಿ ವರ್ಷ ಲೋಕಮಾನ್ಯ ತಿಲಕರ ಪುಣ್ಯತಿಥಿಯಾದ ಆಗಸ್ಟ್ 1 ರಂದು ರಾಷ್ಟ್ರದ ಅಭಿವೃದ್ಧಿಗಾಗಿ ಗಮನಾರ್ಹ ಕೊಡುಗೆಗಳನ್ನು ನೀಡಿದ ವ್ಯಕ್ತಿಗಳಿಗೆ ನೀಡಲಾಗುತ್ತದೆ. ಲೋಕಮಾನ್ಯ ತಿಲಕರ ಪ್ರತಿಮೆಗೆ ಪ್ರಧಾನಿ ಪುಷ್ಪ ನಮನ ಸಲ್ಲಿಸಲಿದ್ದಾರೆ.