ನವದೆಹಲಿ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮೈತ್ರಿಕೂಟ ಭರ್ಜರಿ ಗೆಲುವಿನೊಂದಿಗೆ ಅಧಿಕಾರಕ್ಕೇರಿದ್ದು, ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸಂಭ್ರಮಾಚರಣೆ ನಡೆಸಲಾಗಿದೆ.
ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದ ಪ್ರಧಾನಿ ಮೋದಿ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿ, ಮಹಾರಾಷ್ಟ್ರದಲ್ಲಿ ಅಭಿವೃದ್ಧಿಗೆ ಜನ ಮನ್ನಣೆ ನೀಡಿದ್ದಾರೆ ಎಂದು ಹೇಳಿದ್ದಾರೆ. ಇದು ಸತ್ಯ, ಸಾಮಾಜಿಕ ನ್ಯಾಯದ ವಿಜಯವಾಗಿದೆ. ಅಪಪ್ರಚಾರದ ರಾಜಕಾರಣಕ್ಕೆ ಜನರು ತಕ್ಕ ಉತ್ತರ ನೀಡಿದ್ದಾರೆ. ಪರಿವಾರ ರಾಜಕಾರಣಕ್ಕೆ ಸೋಲಾಗಿದೆ ಎಂದು ಹೇಳಿದ್ದಾರೆ.
ಏಕನಾಥ್ ಶಿಂಧೆ, ದೇವೇಂದ್ರ ಫಡ್ನವೀಸ್, ಅಜಿತ್ ಪವಾರ್ ಅವರ ಶ್ರಮಕ್ಕೆ ಅಭಿನಂದನೆಗಳು. ಅನೇಕ ರಾಜ್ಯಗಳ ಉಪಚುನಾವಣೆಯಲ್ಲಿ ಎನ್.ಡಿ.ಎ. ಹೆಚ್ಚು ಸ್ಥಾನ ಗೆದ್ದಿದೆ. ಉತ್ತರ ಪ್ರದೇಶ, ಉತ್ತರಾಖಂಡ, ರಾಜಸ್ಥಾನ ಜನತೆಗೆ ಅಭಿನಂದನೆಗಳು. ವಿಕಸಿತ ಭಾರತಕ್ಕೆ ಮತದಾರರು ಮನ್ನಣೆ ನೀಡಿದ್ದಾರೆ. ಈ ಗೆಲುವಿಗೆ ಕಾರಣರಾದ ಎನ್.ಡಿ.ಎ. ಪ್ರತಿಯೊಬ್ಬ ಕಾರ್ಯಕರ್ತರಿಗೂ ಧನ್ಯವಾದಗಳು ಎಂದು ಮೋದಿ ಹೇಳಿದ್ದಾರೆ.
ಇಂದು ನಕಾರಾತ್ಮಕ ರಾಜಕೀಯವನ್ನು ಸೋಲಿಸಲಾಗಿದೆ. ಇಂದು ‘ಪರಿವಾರವಾದ’ವನ್ನು ಸೋಲಿಸಲಾಗಿದೆ. ಇಂದು ಮಹಾರಾಷ್ಟ್ರವು ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ಸಂಕಲ್ಪವನ್ನು ಬಲಪಡಿಸಿದೆ. ದೇಶಾದ್ಯಂತ ಬಿಜೆಪಿ ಮತ್ತು ಎನ್‌ಡಿಎ ಎಲ್ಲಾ ಕಾರ್ಯಕರ್ತರನ್ನು ನಾನು ಅಭಿನಂದಿಸುತ್ತೇನೆ ಎಂದು ಹೇಳಿದ್ದಾರೆ.
ನಾನು ಜಾರ್ಖಂಡ್ ಜನರಿಗೆ ಧನ್ಯವಾದ ಹೇಳುತ್ತೇನೆ. ಜಾರ್ಖಂಡ್‌ನ ತ್ವರಿತ ಅಭಿವೃದ್ಧಿಗಾಗಿ ನಾವು ಹೆಚ್ಚು ಶ್ರಮಿಸುತ್ತೇವೆ. ಮಹಾರಾಷ್ಟ್ರದಲ್ಲಿ ಅಭಿವೃದ್ಧಿ, ಉತ್ತಮ ಆಡಳಿತ ಮತ್ತು ಸಾಮಾಜಿಕ ನ್ಯಾಯವು ಗೆದ್ದಿದೆ. ಸುಳ್ಳು ಮತ್ತು ವಂಚನೆಯು ಹೀನಾಯ ಸೋಲನ್ನು ಅನುಭವಿಸಿದೆ ಎಂದು ಹೇಳಿದ್ದಾರೆ.