ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸೋಮವಾರ ಜರ್ಮನ್ ಚಾನ್ಸಲರ್ ಏಂಜೆಲಾ ಮರ್ಕೆಲ್ ಅವರೊಂದಿಗೆ ಅಫ್ಘಾನಿಸ್ತಾನ ಬಿಕ್ಕಟ್ಟು, ನೆರೆ ರಾಷ್ಟ್ರ ಹಾಗೂ ವಿಶ್ವಕ್ಕೆ ಬೀರಬಹುದಾದ ಪರಿಣಾಮದ ಕುರಿತು ಮಾತುಕತೆ ನಡೆಸಿದರು.
ಈ ಸಂಬಂಧ ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಪಿಎಂ, “ಚಾನ್ಸಲರ್ ಮರ್ಕೆಲ್ ಅವರೊಂದಿಗೆ ಮಾತನಾಡಿದ್ದು, ಅಫ್ಘಾನಿಸ್ತಾನದ ಇತ್ತೀಚಿನ ಬೆಳವಣಿಗೆಗಳು ಸೇರಿದಂತೆ ದ್ವಿಪಕ್ಷೀಯ, ಬಹುಪಕ್ಷೀಯ ಹಾಗೂ ಪ್ರಾದೇಶಿಕ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು. ಭಾರತ-ಜರ್ಮನಿ ಕಾರ್ಯತಂತ್ರದ ಪಾಲುದಾರಿಕೆಯನ್ನು ಬಲಪಡಿಸುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು” ಎಂದು ಹೇಳಿದ್ದಾರೆ.
ಇಹಲೋಕ ತ್ಯಜಿಸಿದ ಅಮೆರಿಕಾದ ಅತಿ ಎತ್ತರದ ವ್ಯಕ್ತಿ
ಪ್ರಧಾನ ಮಂತ್ರಿ ಕಚೇರಿಯ ಪ್ರಕಾರ, “ಯುದ್ಧದಿಂದ ಹಾನಿಗೊಳಗಾದ ದೇಶದಲ್ಲಿ ನಡೆಯುತ್ತಿರುವ ಭದ್ರತಾ ಸ್ಥಿತಿ ಹಾಗೂ ಪ್ರಪಂಚದ ಮೇಲೆ ಅದರಿಂದಾಗುವ ಪರಿಣಾಮ ಕುರಿತು ಉಭಯ ನಾಯಕರು ಚರ್ಚಿಸಿದರು. ಮೋದಿ ಹಾಗೂ ಮರ್ಕೆಲ್ ಶಾಂತಿ ಮತ್ತು ಭದ್ರತೆಯನ್ನು ಕಾಪಾಡುವ ಪ್ರಾಮುಖ್ಯತೆ ಬಗ್ಗೆ ಒತ್ತಿ ಹೇಳಿದ್ದಾರೆ. ಅತ್ಯಂತ ತುರ್ತು ಆದ್ಯತೆ ಎಂದರೆ ಜನರನ್ನು ಸ್ಥಳಾಂತರಿಸುವುದು” ಅನ್ನೋ ಬಗ್ಗೆ ಮಾತುಕತೆ ನಡೆಸಿರುವುದಾಗಿ ಪಿಎಂಒ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಇನ್ನು “ಉಭಯ ನಾಯಕರು ತಮ್ಮ ದ್ವಿಪಕ್ಷೀಯ ಕಾರ್ಯಸೂಚಿಯಲ್ಲಿ ಕೋವಿಡ್-19 ಲಸಿಕೆಗಳ ಸಹಕಾರ, ಹವಾಮಾನ ಸಹಕಾರ ಹಾಗೂ ವ್ಯಾಪಾರ ಮತ್ತು ಆರ್ಥಿಕ ಸಂಬಂಧವನ್ನು ಉತ್ತೇಜಿಸುವುದು ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚಿಸಿದರು” ಎಂದು ಪಿಎಂಒ ತನ್ನ ಹೇಳಿಕೆಯಲ್ಲಿ ತಿಳಿಸಿದೆ.