ನವದೆಹಲಿ: ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಸುಮಾರು ಒಂದು ಕೋಟಿ ಮನೆಗಳನ್ನು ನಗರ ಪ್ರದೇಶದ ಬಡವರಿಗಾಗಿ ಮಂಜೂರು ಮಾಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಆಗ್ರಾ ಮೆಟ್ರೋ ಯೋಜನೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಮನೆ ಖರೀದಿದಾರರು ಮತ್ತು ಬಿಲ್ಡರ್ ಗಳ ನಡುವೆ ವಿಶ್ವಾಸ ಮೂಡಿಸಲು ಮತ್ತು ಈ ಕ್ಷೇತ್ರದ ಸಮಸ್ಯೆ ನಿವಾರಿಸಲು ರೇರಾ ಕಾಯ್ದೆ ಜಾರಿಗೆ ತರಲಾಗಿದೆ. ಇದರಿಂದ ಮಧ್ಯಮ ವರ್ಗದ ಜನರಿಗೆ ಅನುಕೂಲವಾಗಿದೆ. ವಸತಿ ನಿರ್ಮಾಣ ಮಾಡುವವರು, ಗ್ರಾಹಕರ ನಡುವೆ ವಿಶ್ವಾಸ ತುಂಬಲಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ನಗರ ಪ್ರದೇಶದಲ್ಲಿ ಬಡವರಿಗೆ ಮನೆ ಖರೀದಿಸಲು ಇದೇ ಮೊದಲ ಬಾರಿಗೆ ಆರ್ಥಿಕ ನೆರವು ನೀಡಲಾಗುತ್ತಿದೆ. ಸುಮಾರು 12 ಲಕ್ಷಕ್ಕೂ ಅಧಿಕ ಕುಟುಂಬಗಳು ಮನೆ ಖರೀದಿಸಲು 28 ಸಾವಿರ ಕೋಟಿ ರೂಪಾಯಿ ನೀಡಲಾಗಿದೆ ಎಂದು ಮೋದಿ ಹೇಳಿದ್ದಾರೆ.