ನವದೆಹಲಿ: ಕಳೆದ 6 ದಿನಗಳ ಹಿಂದೆ ಹೈದರಾಬಾದ್‌ನ ಎಲ್‌ಬಿ ಸ್ಟೇಡಿಯಂನಲ್ಲಿ ವಿದಾಯದ ಪಂದ್ಯ ಆಡುವುದರೊಂದಿಗೆ ಎರಡು ದಶಕಗಳ ಟೆನಿಸ್ ವೃತ್ತಿ ಬದುಕಿಗೆ ವಿದಾಯ ಹೇಳಿದ್ದಾರೆ ಸಾನಿಯಾ ಮಿರ್ಜಾ. ಇವರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನಾ ಪತ್ರ ಸಲ್ಲಿಸಿದ್ದಾರೆ.
ಚಾಂಪಿಯನ್ ಸಾನಿಯಾ ಎಂಬ ಹೊಗಳಿಕೆಯ ಮಾತಿನೊಂದಿಗೆ ಅಭಿನಂದನಾ ಪತ್ರವನ್ನು ಆರಂಭಿಸಿರುವ ಪ್ರಧಾನಿ ಮೋದಿ, ಇಡೀ ಪತ್ರದಲ್ಲಿ ಸಾನಿಯಾ ಅವರ ಸಾಧನೆಯನ್ನು ಕೊಂಡಾಡಿದ್ದಾರೆ. ಹಾಗೆಯೇ ಭಾರತದ ಟೆನಿಸ್ಗೆ ಸಾನಿಯಾ ಅವರ ಕೊಡುಗೆಯನ್ನು ಶ್ಲಾಘಿಸಿದ್ದಾರೆ. ಸಾನಿಯಾ ಅವರ ತಂದೆ ತಾಯಿಗೂ ಕೃತಜ್ಞತೆ ಸಲ್ಲಿಸಿದ್ದಾರೆ. ಇದರ ಜೊತೆಗೆ ಸಾನಿಯಾ ಅವರ ಭವಿಷ್ಯದ ಯೋಜನೆಗಳಿಗೂ ಶುಭ ಹಾರೈಸಿದ್ದಾರೆ.
ಕಳೆದ 9 ರಂದು ಸಾನಿಯಾ ಮಿರ್ಜಾ ಅವರ ಸಾಧನೆಗೆ ದೇಶದ ಪರವಾಗಿ ಅಭಿನಂದನಾ ಪತ್ರವನ್ನು ಬರೆದಿದ್ದ ಪ್ರಧಾನಿಯವರ ಪತ್ರವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಸಾನಿಯಾ ಮಿರ್ಜಾ, ಪ್ರಧಾನಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
‘ಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ನನ್ನ ಕೃತಜ್ಞತೆಗಳು. ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ನಮ್ಮ ದೇಶವನ್ನು ಪ್ರತಿನಿಧಿಸುವಲ್ಲಿ ನಾನು ಯಾವಾಗಲೂ ಹೆಮ್ಮೆಪಡುತ್ತೇನೆ. ಮತ್ತು ನಮ್ಮ ದೇಶವನ್ನು ಹೆಮ್ಮೆ ಪಡಿಸಲು ನಾನು ನನ್ನ ಕೈಲಾದಷ್ಟು ಮಾಡುವುದನ್ನು ಮುಂದುವರಿಸುತ್ತೇನೆ. ನಿಮ್ಮ ಬೆಂಬಲಕ್ಕೆ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ.