ಮೈಸೂರು: ಲೋಕಸಭಾ ಚುನಾವಣೆ ಅಖಾಡ ರಂಗೇರಿದ್ದು, ಬಿಜೆಪಿ-ಜೆಡಿಎಸ್ ಮೈತ್ರಿ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಜಿಲ್ಲೆಯಿಂದಲೇ ಶಕ್ತಿ ಪ್ರದರ್ಶನ ನಡೆಸಿದ್ದಾರೆ. ಮೈಸೂರಿನ ಮಹಾರಾಜಾ ಕಾಲೇಜು ಮೈದಾನದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ, ಮಾಜಿ ಸಿಎಂ ಬಿ.ಎಸ್,ಯಡಿಯುರಪ್ಪ, ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್, ಸಂಸದ ಪ್ರಜ್ವಲ್ ರೇವಣ್ಣ, ಸುಮಲತಾ ಅಂಬರೀಶ್ ಸೇರಿದಂತೆ ಘಟಾನುಘಟಿ ನಾಯಕರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಕನ್ನಡದಲ್ಲೇ ಭಾಷಣ ಆರಂಭಿಸಿದರು.
ನಿಮಗೆಲ್ಲಾ ನನ್ನ ನಮಸ್ಕಾರಗಳು ಎಂದು ಕನ್ನಡದಲ್ಲಿ ಭಾಷಣ ಆರಂಭಿಸಿದ ಪ್ರಧಾನಿ ಮೋದಿ, ಇಂದು ಚೈತ್ರ ನವರಾತ್ರಿಯ ಪವಿತ್ರ ಸಂದರ್ಭದಲ್ಲಿ ತಾಯಿ ಚಾಮುಂಡೇಶ್ವರಿ ಆಶಿರ್ವಾದ ಪಡೆಯುವ ಸೌಭಾಗ್ಯ ಸಿಕ್ಕಿದೆ. ತಾಯಿ ಭುವನೇಶ್ವರಿ, ಕಾವೇರಿ ಮಾತೆಗೆ ನನ್ನ ಪ್ರಣಾಮಗಳು ಎಂದರು.
ಇಂದು ಬಿಜೆಪಿ ಸಂಕಲ್ಪ ಪತ್ರ ಬಿಡುಗಡೆ ಮಾಡಲಾಗಿದೆ. ಬಡವರಿಗೆ 3 ಕೋಟಿ ಮನೆ ನಿರ್ಮಾಣ ಮಡುತ್ತೇವೆ. 70 ವರ್ಷ ಮೇಲ್ಪಟ್ಟವರಿಗೂ ಆಯುಷ್ಮಾನ್ ಭಾರತ್ ಮೂಲಕ ಉಚಿತ ಚಿಕಿತ್ಸೆ ನೀಡಲಾಗುವುದು. ಕರ್ನಾಟಕದ ಪ್ರತಿಯೊಬ್ಬರ ಜೀವನ ಅಭಿವೃದ್ಧಿಗಾಗಿ ನಮ್ಮ ಗ್ಯಾರಂಟಿ ಘೋಷಿಸಲಾಗಿದೆ ಎಂದರು.
ಭಾರತ ಸಂಶೋದನೆಯ ಹಬ್ ಆಗಲಿದೆ. ಚಂದ್ರಯಾನ ಸೆಮಿಕಂಡಕ್ಟರ್ ಗಳ ಮೂಲಕ ಸಾಧನೆ ಮಾಡುತ್ತಿದ್ದೇವೆ. ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಭಾರತದ ಭಿವೃದ್ಧಿಗೆ ಜಗತ್ತೇ ಚಕಿತಗೊಳ್ಳುತ್ತಿದೆ ಎಂದು ಹೇಳಿದರು.