ವಾರಣಾಸಿ: ಉಕ್ರೇನ್ ನಿಂದ ವಾಪಸಾದ ವಿದ್ಯಾರ್ಥಿಗಳೊಂದಿಗೆ ಉತ್ತರಪ್ರದೇಶದ ವಾರಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದಾರೆ. ಉಕ್ರೇನ್ ನಲ್ಲಿ ಆದ ಅನುಭವಗಳನ್ನು ವಿದ್ಯಾರ್ಥಿಗಳು ಹಂಚಿಕೊಂಡಿದ್ದಾರೆ.
ಪ್ರಧಾನಿ ಮೋದಿ ಅವರು ಉಕ್ರೇನ್ ನಲ್ಲಿನ ಪರಿಸ್ಥಿತಿಯ ಕುರಿತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಮಾತನಾಡಿ ಭಾರತೀಯರಿಗೆ ಸುರಕ್ಷತ ಕೋರಿದ ನಂತರ, ಇಂದು ವಾರಣಾಸಿಯಲ್ಲಿ ಉಕ್ರೇನ್ ನಿಂದ ಹಿಂದಿರುಗಿದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ವಾರಣಾಸಿಯಲ್ಲಿ ಹೈವೋಲ್ಟೇಜ್ ಮತದಾನಕ್ಕೆ ಸಾಕ್ಷಿಯಾಗುವ ಮುನ್ನವೇ ಪ್ರಧಾನಿ ಮೋದಿ ಅವರು ವಿದ್ಯಾರ್ಥಿಗಳೊಂದಿಗೆ ಸಭೆ ನಡೆಸಿದ್ದಾರೆ.
ಪ್ರಧಾನಿ ಮೋದಿಯವರೊಂದಿಗೆ ಸಂವಾದದ ವೇಳೆ ವಿದ್ಯಾರ್ಥಿಗಳು ತಮ್ಮ ಅನುಭವಗಳನ್ನು ಅವರೊಂದಿಗೆ ಹಂಚಿಕೊಂಡರು. ವಿದ್ಯಾರ್ಥಿಗಳು ವಾರಣಾಸಿ ಹಾಗೂ ಉತ್ತರ ಪ್ರದೇಶದ ಇತರ ಭಾಗದವರಾಗಿದ್ದಾರೆ.
ವಾರಣಾಸಿ ಪ್ರಧಾನಿ ಮೋದಿ ಪ್ರತಿನಿಧಿಸುವ ಸಂಸದೀಯ ಕ್ಷೇತ್ರವಾಗಿದೆ. ಒಟ್ಟು 17,000 ಭಾರತೀಯ ಪ್ರಜೆಗಳು ಉಕ್ರೇನ್ ತೊರೆದಿದ್ದಾರೆ. ಉಕ್ರೇನ್ ನಲ್ಲಿ ಸಿಲುಕಿರುವ ಉಳಿದ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ಅನುಕೂಲವಾಗುವಂತೆ ಆಪರೇಷನ್ ಗಂಗಾ ಅಡಿಯಲ್ಲಿ ವಿಮಾನಗಳನ್ನು ಹೆಚ್ಚಿಸಲಾಗಿದೆ.
ಉಕ್ರೇನ್ ತೊರೆದ ವಿದ್ಯಾರ್ಥಿಗಳಲ್ಲಿ ಈ ಹಿಂದೆ ಕೈವ್ ನಲ್ಲಿರುವ ಭಾರತದ ರಾಯಭಾರ ಕಚೇರಿಯಲ್ಲಿ ನೋಂದಾಯಿಸದ ಕೆಲವು ಭಾರತೀಯರೂ ಸೇರಿದ್ದಾರೆ.