ಹೈದರಾಬಾದ್: 11ನೇ ಶತಮಾನದ ಭಕ್ತಿ ಸಂತ ಶ್ರೀ ರಾಮಾನುಜಾಚಾರ್ಯರ ಸ್ಮರಣಾರ್ಥ ‘ಸಮಾನತೆಯ ಪ್ರತಿಮೆ’ಯನ್ನು ರಾಷ್ಟ್ರಕ್ಕೆ ಸಮರ್ಪಿಸಲು ಪ್ರಧಾನಿ ನರೇಂದ್ರ ಮೋದಿ ಹೈದರಾಬಾದ್ ಗೆ ಆಗಮಿಸಿದ ಸಂದರ್ಭದಲ್ಲಿ ತೆಲಂಗಾಣ ಸಿಎಂ ಕೆಸಿಆರ್ ಅವರು ಸ್ವಾಗತಿಸಲು ಆಗಮಿಸದಿರುವುದು ಬಿಜೆಪಿ ಆಕ್ರೋಶಕ್ಕೆ ಕಾರಣವಾಗಿದೆ.
ಹೈದರಾಬಾದ್‌ನ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸ್ವಾಗತ ಸಮಾರಂಭದಲ್ಲಿ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರು ಗೈರುಹಾಜರಾಗಿದ್ದರು. ಸಿಎಂ ಅನುಪಸ್ಥಿತಿಯು ಕೇಸರಿ ಪಕ್ಷವನ್ನು ಕೆರಳಿಸಿದೆ. ಕೆಸಿಆರ್ ಅವರು ಪ್ರೋಟೋಕಾಲ್ ಅನುಸರಿಸಲು ವಿಫಲರಾಗಿದ್ದಾರೆ ಮತ್ತು ಪ್ರಧಾನಿ ಅವರನ್ನು ಅವಮಾನಿಸಿದ್ದಾರೆ. ಪಂಜಾಬ್ ಸಿಎಂ ಬಳಿಕ ತೆಲಂಗಾಣ ಸಿಎಂ ಅದೇ ನಡೆ ಅನುಸರಿಸಿದ್ದಾರೆ ಎಂದು ಟೀಕಿಸಿದೆ.
ಗವರ್ನರ್ ತಮಿಳಿಸೈ ಸೌಂದರರಾಜನ್, ಕೇಂದ್ರ ಪ್ರವಾಸೋದ್ಯಮ ಸಚಿವ ಜಿ. ಕಿಶನ್ ರೆಡ್ಡಿ ಮತ್ತು ತೆಲಂಗಾಣ ಸಚಿವ ತಲಸಾನಿ ಶ್ರೀನಿವಾಸ್ ಯಾದವ್ ಸೇರಿದಂತೆ ಪ್ರಮುಖರು ಮೋದಿ ಅವರನ್ನು ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು.
ಮುಖ್ಯಮಂತ್ರಿ ಜ್ವರದಿಂದ ಬಳಲುತ್ತಿದ್ದು, ಅವರು ಆರೋಗ್ಯವಾಗಿಲ್ಲದ ಕಾರಣ ಪ್ರಧಾನಿ ಆಹ್ವಾನಕ್ಕೆ ಹೋಗಿರಲಿಲ್ಲ. ಪ್ರಧಾನಿ ಅವರನ್ನು ಬರಮಾಡಿಕೊಳ್ಳಲು ಸಚಿವ ತಲಸಾನಿ ಶ್ರೀನಿವಾಸ್ ಯಾದವ್ ಅವರನ್ನು ನಿಯೋಜಿಸಲಾಗಿದೆ ಎಂದು ಸಿಎಂಒ ತಿಳಿಸಿದೆ.
ತೆಲಂಗಾಣ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್ ಕುಮಾರ್ ಅವರು, ವಿಮಾನ ನಿಲ್ದಾಣದಲ್ಲಿ ರಾವ್ ಅವರ ಗೈರುಹಾಜರಿಯನ್ನು ತೀವ್ರವಾಗಿ ಖಂಡಿಸಿ, ಕುಂಟು ನೆಪಗಳನ್ನು ಹೇಳಿ ಮೋದಿ ಭೇಟಿಗೆ ಬಾರದಿರುವುದು ನಾಚಿಕೆಗೇಡಿನ ಸಂಗತಿ. ಪ್ರಧಾನಿಯನ್ನು ಅವಮಾನಿಸುವುದು ಇಡೀ ರಾಷ್ಟ್ರವನ್ನು ಅವಮಾನಿಸಿದಂತೆ ಎಂದು ಟೀಕಿಸಿದ್ದಾರೆ.