ಪಾಲ್ಘರ್: ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಕುಸಿತ ಘಟನೆಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿ, ಮರಾಠಿಗರ ಕ್ಷಮೆ ಕೋರಿದ್ದಾರೆ.
2013ರಲ್ಲಿ ನನ್ನನ್ನು ಪ್ರಧಾನಿ ಅಭ್ಯರ್ಥಿಯಾಗಿ ಬಿಜೆಪಿ ಘೋಷಿಸಿದ ಕೂಡಲೇ ರಾಯಗಢದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಸಮಾಧಿಯ ಮುಂದೆ ಭಕ್ತನಾಗಿ ಕುಳಿತಿದ್ದೆ. ಅಲ್ಲಿಂದಲೇ ಹೊಸ ಪಯಣ ಆರಂಭವಾಯಿತು. ಶಿವಾಜಿ ಮಹಾರಾಜರು ನಮ್ಮ ಪಾಲಿಗೆ ಕೇವಲ ಹೆಸರು, ರಾಜ ಅಷ್ಟೇ ಅಲ್ಲ, ಅವರು ನಮಗೆ ಪೂಜಿತರು. ದೇವರು ಅವರ ಪಾದಕ್ಕೆ ನಮಸ್ಕರಿಸಿ ಆದ ಘಟನೆಗೆ ಕ್ಷಮೆ ಕೋರುತ್ತೇನೆ ಎಂದು ಹೇಳಿದ್ದಾರೆ.
ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಮಹಾರಾಷ್ಟ್ರಕ್ಕೆ ಶುಕ್ರವಾರ ಭೇಟಿ ನೀಡಿದ್ದ ಪ್ರಧಾನಿ ಮೋದಿ, ಪಾಲ್ಘರ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ಛತ್ರಪತಿ ಶಿವಾಜಿ ಮಹಾರಾಜ್ ನಮ್ಮ ಪಾಲಿಗೆ ಕೇವಲ ಒಂದು ಹೆಸರಲ್ಲ, ಇಂದು ನಾನು ತಲೆಬಾಗಿ ನನ್ನ ದೇವರು ಛತ್ರಪತಿ ಶಿವಾಜಿ ಮಹಾರಾಜರ ಕ್ಷಮೆ ಕೋರುತ್ತೇನೆ. ಶಿವಾಜಿ ಮಹಾರಾಜರನ್ನು ದೇವರು ಎಂದು ಪರಿಗಣಿಸಿದವರಿಗೆ ಈ ಘಟನೆಯಿಂದ ಘಾಸಿಕೊಂಡವರಿಗೆ ನಾನು ನನ್ನ ಶಿರ ಬಾಗಿ ಕ್ಷಮೆಯಾಚಿಸುತ್ತೇನೆ. ನಮಗೆ ನಮ್ಮ ದೇವರಿಗಿಂತ ದೊಡ್ಡದು ಯಾವುದೂ ಇಲ್ಲ ಎಂದು ಹೇಳಿದ್ದಾರೆ.
ಸಿಂಧುದುರ್ಗ ಜಿಲ್ಲೆಯ ಶಿವಾಜಿ ಮಹಾರಾಜರ 35 ಅಡಿ ಎತ್ತರದ ಪ್ರತಿಮೆ ಆಗಸ್ಟ್ 26ರಂದು ಮುರಿದು ಬಿದ್ದಿತ್ತು. ಈ ಹಿನ್ನಲೆಯಲ್ಲಿ ಮೋದಿ ಶಿವಾಜಿ ಮಹಾರಾಜರ ಪ್ರತಿಮೆ ಪತನಗೊಂಡಿದ್ದಕ್ಕೆ ಕ್ಷಮೆಯಾಚಿಸುತ್ತೇನೆ. ಅವಘಡದಿಂದ ನೋವುಂಡ ಜನರಲ್ಲಿಯೂ ನಾನು ಕ್ಷಮೆ ಕೋರುತ್ತೇನೆ ಎಂದು ತಿಳಿಸಿದ್ದಾರೆ.