ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಪ್ರಧಾನಿ ನರೇಂದ್ರ ಮೋದಿಯವರು ಇದರ ಮೂಲಕವೇ ಭಾರತದ ಜನತೆಯೊಂದಿಗೆ ಕನೆಕ್ಟ್ ಆಗುತ್ತಿದ್ದಾರೆ. ಈಗಾಗಲೇ ಎಕ್ಸ್ (ಈ ಮೊದಲು ಟ್ವಿಟ್ಟರ್), ಫೇಸ್ಬುಕ್ ಸೇರಿದಂತೆ ಹಲವು ಸೋಶಿಯಲ್ ಮೀಡಿಯಾಗಳಲ್ಲಿ ಮೋದಿಯವರು ಕೋಟ್ಯಾಂತರ ಮಂದಿ ಹಿಂಬಾಲಕರನ್ನು ಹೊಂದಿದ್ದು, ಇದೀಗ ಅವರ ಸೋಶಿಯಲ್ ಮೀಡಿಯಾದ ಮತ್ತೊಂದು ಖಾತೆ ಹೊಸ ಹೆಗ್ಗಳಿಕೆಗೆ ಪಾತ್ರವಾಗಿದೆ.
ಸೋಶಿಯಲ್ ಮೀಡಿಯಾದ ಪ್ರಭಾವಿ ಮಾಧ್ಯಮವಾದ ವಾಟ್ಸಾಪ್, ಈಗ ಚಾನೆಲ್ ಆರಂಭಿಸಿದ್ದು, ವಾಟ್ಸಾಪ್ ಚಾನೆಲ್ ಖಾತೆ ತೆರೆದ ಪ್ರಧಾನಿ ನರೇಂದ್ರ ಮೋದಿಯವರಿಗೆ ಮೊದಲ ದಿನವೇ ಮಿಲಿಯನ್ ಫಾಲೋವರ್ ಗಳು ದೊರಕಿದ್ದರು. ಇದೀಗ ವಾರ ಕಳೆಯುವಷ್ಟರಲ್ಲಿ ಅವರ ವಾಟ್ಸಾಪ್ ಖಾತೆಯ ಫಾಲೋವರ್ಸ್ ಗಳ ಸಂಖ್ಯೆ 50 ಲಕ್ಷ ತಲುಪಿದೆ. ಈ ಮೂಲಕ ವಾಟ್ಸಾಪ್ ಚಾನೆಲ್ ನಲ್ಲಿ ಅತಿ ವೇಗವಾಗಿ ಫಾಲೋವರ್ಸ್ ಗಳನ್ನು ಪಡೆದ ಹೆಗ್ಗಳಿಕೆಗೆ ಮೋದಿ ಅವರ ವಾಟ್ಸಾಪ್ ಚಾನೆಲ್ ಖಾತೆ ಪಾತ್ರವಾಗಿದೆ.
ನರೇಂದ್ರ ಮೋದಿಯವರು ಎಕ್ಸ್ ನಲ್ಲಿ 90 ಮಿಲಿಯನ್ ಫಾಲೋವರ್ಸ್ ಗಳನ್ನು ಹೊಂದಿದ್ದು, ಭಾರತದ ಅತ್ಯಧಿಕ ಸಂಖ್ಯೆಯ ಹಿಂಬಾಲಕರನ್ನು ಹೊಂದಿದ ಖ್ಯಾತಿಗೆ ಪಾತ್ರರಾಗಿದ್ದಾರೆ. ಇನ್ನು ಫೇಸ್ಬುಕ್ಕಿನಲ್ಲಿ 48 ಮಿಲಿಯನ್ ಹಾಗೂ ಇನ್ಸ್ಟಾಗ್ರಾಮ್ ನಲ್ಲಿ 79 ಮಿಲಿಯನ್ ಫಾಲೋವರ್ಸ್ ಗಳನ್ನು ನರೇಂದ್ರ ಮೋದಿ ಹೊಂದಿದ್ದಾರೆ. ಇದೀಗ ಅವರ ವಾಟ್ಸಾಪ್ ಚಾನೆಲ್ ಖಾತೆ ವಾರದೊಳಗಾಗಿ 5 ಮಿಲಿಯನ್ ಫಾಲೋವರ್ಸ್ಗಳನ್ನು ಪಡೆದಿದ್ದು, ಇದಕ್ಕಾಗಿ ನರೇಂದ್ರ ಮೋದಿಯವರು ಧನ್ಯವಾದ ಅರ್ಪಿಸಿದ್ದಾರೆ.