ಬೆಂಗಳೂರು : ಚಂದ್ರಯಾನ -3 ಸಕ್ಸಸ್ ಹಿನ್ನೆಲೆಯಲ್ಲಿ ನಾಳೆ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನ ಇಸ್ರೋ ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ. ಇದೇ ವೇಳೆ ಬಿಜೆಪಿ ಪ್ರಧಾನಿ ಮೋದಿ ರೋಡ್ ಶೋ ನಡೆಸಲು ನಿರ್ಧರಿಸಿತ್ತು, ಆದರೆ ಕೊನೇ ಕ್ಷಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ ರದ್ದಾಗಿದೆ.
ಅದೇ ರೀತಿ ಎಲ್ಲಿಯೂ ಕೂಡ ಬಿಜೆಪಿ ಬಾವುಟ ಕಟ್ಟುವ ಹಾಗಿಲ್ಲ. ಬರೀ ತ್ರಿವಣ ಧ್ವಜ ಮಾತ್ರ ಹಾರಾಡಬೇಕು ಎಂದು ಖಡಕ್ ಆದೇಶ ಹೊರಡಿಸಲಾಗಿದೆ. ಮೋದಿ ಈಗ ಹೇಳಲಾದ ಮಾರ್ಗದ ಮೂಲಕವೇ ಬರಲಿದ್ದು, ಆದರೆ, ಈ ವೇಳೆ ಎಲ್ಲಿಯೂ ಸಹ ಬಿಜೆಪಿಯ ಧ್ವಜವನ್ನು ಕಟ್ಟಬಾರದು ಎಂದು ಪ್ರಧಾನ ಮಂತ್ರಿ ಕಾರ್ಯಾಲಯ ಆದೇಶ ಹೊರಡಿಸಿದೆ.
ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಒಂದು ದಿನದ ಭೇಟಿಗಾಗಿ ಗ್ರೀಸ್ ತಲುಪಿದ್ದ, ಶನಿವಾರ ರಾಜ್ಯಕ್ಕೆ ಆಗಮಿಸಲಿದ್ದಾರೆ
1983ರ ಸೆಪ್ಟೆಂಬರ್ ನಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿ ಗ್ರೀಸ್ ಗೆ ಭೇಟಿ ನೀಡಿದ ಬಳಿಕ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಅಥೆನ್ಸ್ ಭೇಟಿ ಮಹತ್ವ ಪಡೆದುಕೊಂಡಿದೆ. ಗ್ರೀಕ್ ಕಡೆಯಿಂದ, ಪ್ರಧಾನಿ ಕೈರಿಯಾಕೊಸ್ ಮಿಟ್ಸೊಟಾಕಿಸ್ 2019 ರಲ್ಲಿ ನವದೆಹಲಿಗೆ ಭೇಟಿ ನೀಡಿದ್ದರು.
ಬೆಂಗಳೂರಿನಲ್ಲಿ ಮಾರ್ಗ ಬದಲಾವಣೆ
ಪ್ರಧಾನಿ ನರೇಂದ್ರ ಮೋದಿ ಆಗಮನ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಕೆಲ ಮಾರ್ಗಗಳನ್ನು ಬದಲಾವಣೆ ಮಾಡಲಾಗುತ್ತಿದೆ. ಸಂಚಾರ ಮಾರ್ಗದಲ್ಲಿ ಕೆಲ ಬದಲಾವಣೆಗಳಾಗಿದ್ದು, ಪರ್ಯಾಯ ಮಾರ್ಗ ಅನುಸರಿಸುವಂತೆ ಸಂಚಾರಿ ಪೊಲೀಸರು ಸೂಚಿಸಿದ್ದಾರೆ.
ಬೆಳಿಗ್ಗೆ 4:30ರಿಂದ ಬೆಳಿಗ್ಗೆ 9:30ರವರೆಗೆ ಸಂಚಾರ ಬದಲಾವಣೆ ಮಾಡಲಾಗಿದೆ. ಹಳೇ ಏರ್ ಪೋರ್ಟ್ ರಸ್ತೆ, ಹಳೇ ಮದ್ರಾಸ್ ರಸ್ತೆ, ಎಂ.ಜಿ.ರಸ್ತೆ, ಕಬ್ಬನ್ ರಸ್ತೆ, ರಾಜಭವನ ರಸ್ತೆ, ಬಳ್ಳಾರಿ ರಸ್ತೆ (ಮೇಖ್ರೀ ಸರ್ಕಲ್) ಸಿ.ವಿ.ರಾಮನ್ ರಸ್ತೆ, ಯಶವಂತಪುರ ಫ್ಲೈ ಓವರ್, ತುಮಕೂರು ರಸ್ತೆ (ಯಶವಂತಪುರದಿಂದ ನಾಗಸಂದ್ರದವರೆಗೆ) ಮಾಗಡಿ ರಸ್ತೆ, ಗೊರಗುಂಟೆ ಪಾಳ್ಯ ಜಂಕ್ಷನ್ ನಿಂದ ಸೋಮನಹಳ್ಳಿ, ಗುಬ್ಬಿ ತೋಟದಪ್ಪ ರಸ್ತೆ, ಜಾಲಹಳ್ಳಿ ಕ್ರಾಸ್ ರಸ್ತೆಗಳಲ್ಲಿ ಸಂಚಾರ ಬದಲಾವಣೆ ಮಾಡಲಾಗಿದೆ.