ನವದೆಹಲಿ: ಪ್ರಧಾನಿ ಮೋದಿಯವರ ‘ಮೇಕ್ ಇನ್ ಇಂಡಿಯಾ’ ಭಾರತದ ಆರ್ಥಿಕತೆಯ ಮೇಲೆ ಪ್ರಭಾವಶಾಲಿ ಪರಿಣಾಮ ಬೀರಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ಲಾಘಿಸಿದ್ದಾರೆ. ಮೋದಿ ಅವರ ‘ಮೇಕ್ ಇನ್ ಇಂಡಿಯಾ’ ಉಪಕ್ರಮವು ಭಾರತದ ಆರ್ಥಿಕತೆಯ ಮೇಲೆ ನಿಜವಾಗಿಯೂ ಪ್ರಭಾವಶಾಲಿ ಪರಿಣಾಮವನ್ನು ಬೀರಿದೆ ಎಂದು ಹೇಳಿದ್ದಾರೆ.
ಮಾಸ್ಕೋದಲ್ಲಿ ರಷ್ಯಾದ ಏಜೆನ್ಸಿ ಫಾರ್ ಸ್ಟ್ರಾಟೆಜಿಕ್ ಇನಿಶಿಯೇಟಿವ್ಸ್(ASI) ಆಯೋಜಿಸಿದ್ದ ವೇದಿಕೆಯಲ್ಲಿ ಪುಟಿನ್ ಮಾತನಾಡುತ್ತಿದ್ದರು.
ಸ್ಥಳೀಯವಾಗಿ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲು, ತಯಾರಿಸಲು ಮತ್ತು ಜೋಡಿಸಲು ಕಂಪನಿಗಳನ್ನು ಪ್ರೋತ್ಸಾಹಿಸುವ ದೇಶಕ್ಕೆ ಭಾರತವನ್ನು ಉದಾಹರಣೆಯಾಗಿ ವ್ಲಾಡಿಮಿರ್ ಪುಟಿನ್ ಉಲ್ಲೇಖಿಸಿದ್ದಾರೆ.
ಭಾರತದಲ್ಲಿರುವ ನಮ್ಮ ಸ್ನೇಹಿತರು ಮತ್ತು ನಮ್ಮ ದೊಡ್ಡ ಸ್ನೇಹಿತ ಪ್ರಧಾನಿ ನರೇಂದ್ರ ಮೋದಿ ಅವರು ವರ್ಷಗಳ ಹಿಂದೆ ‘ಮೇಕ್ ಇನ್ ಇಂಡಿಯಾ’ ಉಪಕ್ರಮ ಪ್ರಾರಂಭಿಸಿದರು. ಇದು ಭಾರತದ ಆರ್ಥಿಕತೆಯ ಮೇಲೆ ನಿಜವಾಗಿಯೂ ಪ್ರಭಾವಶಾಲಿ ಪರಿಣಾಮವನ್ನು ಬೀರಿದೆ. ನಾವೂ ಅದನ್ನು ಅನುಸರಿಸಬೇಕಿದೆ ಎಂದು ಹೇಳಿದ್ದಾರೆ.
ರಷ್ಯಾದಲ್ಲಿ ದೇಶೀಯ ಉತ್ಪನ್ನಗಳು ಮತ್ತು ಬ್ರ್ಯಾಂಡ್ಗಳನ್ನು ಉತ್ತೇಜಿಸಲು ಭಾರತದ ಉದಾಹರಣೆಯನ್ನು ನೀಡಿದ ಪುಟಿನ್, ನಮ್ಮ ಕಂಪನಿಗಳು ತಮ್ಮ ಉತ್ಪನ್ನಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾರಾಟ ಮಾಡಲು, ಸ್ಥಳೀಯ ಉತ್ಪಾದನಾ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲು ಮತ್ತು ವಿದೇಶಿ ಹೂಡಿಕೆದಾರರನ್ನು ಆಕರ್ಷಿಸಲು ಪರಿಣಾಮಕಾರಿ ಮಾದರಿಯನ್ನು ರಚಿಸಲು ಭಾರತ ಮಾದರಿ ಅನುಸರಿಬೇಕಿದೆ ಎಂದರು.