ನವದೆಹಲಿ: ಜನೌಷಧಿ ಕೇಂದ್ರಗಳ ಸಂಖ್ಯೆಯನ್ನು 10,000 ರಿಂದ 25,000 ಕ್ಕೆ ಹೆಚ್ಚಿಸಲು ಕೇಂದ್ರವು ಕೆಲಸ ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದ್ದಾರೆ.
ಕೆಂಪುಕೋಟೆಯಲ್ಲಿ 77ನೇ ಸ್ವಾತಂತ್ರ್ಯ ದಿನದಂದು ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು, ಗುಣಮಟ್ಟದ ಜೆನೆರಿಕ್ ಔಷಧಗಳನ್ನು ಸಮರ್ಪಿತ ಮಳಿಗೆಗಳ ಮೂಲಕ ಎಲ್ಲಾ ನಾಗರಿಕರಿಗೆ ಕೈಗೆಟುಕುವ ಬೆಲೆಯಲ್ಲಿ ಒದಗಿಸುವ ಮತ್ತು ಖಚಿತಪಡಿಸುವ ಈ ಕೇಂದ್ರಗಳು ಜನರಿಗೆ, ವಿಶೇಷವಾಗಿ ಮಧ್ಯಮ ವರ್ಗದ ಜನರಿಗೆ ಹೊಸ ಶಕ್ತಿಯನ್ನು ನೀಡಿದೆ ಎಂದು ಹೇಳಿದ್ದಾರೆ.
ಜನೌಷಧಿ ಕೇಂದ್ರಗಳು ದೇಶದ ಮಧ್ಯಮ ವರ್ಗದವರಿಗೆ ಹೊಸ ಶಕ್ತಿ ನೀಡಿವೆ. ಜನೌಷಧಿ ಕೇಂದ್ರಗಳ ಸಂಖ್ಯೆಯನ್ನು 25,000 ಕೇಂದ್ರಗಳಿಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ಅವರು ಹೇಳಿದರು.
ಮಾರ್ಚ್ 31 ರವರೆಗೆ ಭಾರತದಾದ್ಯಂತ ಇಂತಹ 9,303 ಕೇಂದ್ರಗಳಿವೆ. ಕೇಂದ್ರ ಆರೋಗ್ಯ ಸಚಿವಾಲಯವು ವರ್ಷಾಂತ್ಯದ ವೇಳೆಗೆ ಇಂತಹ ಕೇಂದ್ರಗಳ ಸಂಖ್ಯೆಯನ್ನು 10,000 ಕ್ಕೆ ಏರಿಸಲು ಯೋಜಿಸಿದೆ. ಈ ಮಳಿಗೆಗಳು 1,800 ಔಷಧಗಳು ಮತ್ತು 285 ಶಸ್ತ್ರಚಿಕಿತ್ಸಾ ವಸ್ತುಗಳನ್ನು ಒಳಗೊಂಡಿವೆ.
ಯಾರಿಗಾದರೂ ಮಧುಮೇಹ ಇರುವುದು ಪತ್ತೆಯಾದರೆ, ತಿಂಗಳಿಗೆ 3,000 ಬಿಲ್ ಬರುತ್ತದೆ. ಆದರೆ ಜನೌಷಧಿ ಕೇಂದ್ರಗಳಲ್ಲಿ ನಾವು 100 ರೂಪಾಯಿ ವೆಚ್ಚದ ಔಷಧಿಗಳನ್ನು 10 ರಿಂದ 15 ರೂಪಾಯಿಗಳಿಗೆ ತಲುಪಿಸುತ್ತಿದ್ದೇವೆ ಎಂದು ಮೋದಿ ಹೇಳಿದ್ದಾರೆ.
ಕೇಂದ್ರವು ತನ್ನ ರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ವಿಮಾ ಯೋಜನೆಯಾದ ಆಯುಷ್ಮಾನ್ ಭಾರತ್‌ಗೆ ಇದುವರೆಗೆ 70,000 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ. ಸೆಪ್ಟೆಂಬರ್ 2018 ರಲ್ಲಿ ಪ್ರಾರಂಭವಾದ ಈ ಯೋಜನೆಯು ಎರಡು ಘಟಕಗಳನ್ನು ಹೊಂದಿದೆ. ಮೊದಲನೆಯದು ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ(PMJAY), ಇದು ಸುಮಾರು 12.5 ಕೋಟಿ ಕುಟುಂಬಗಳಿಗೆ 5 ಲಕ್ಷ ರೂ. ದವರೆಗೆ ನಗದು ರಹಿತ ಆಸ್ಪತ್ರೆ ಸೇವೆಗಳನ್ನು ಒದಗಿಸುತ್ತದೆ ಮತ್ತು ಎರಡನೆಯದು ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳ ಅಡಿಯಲ್ಲಿ ಗ್ರಾಮೀಣ ಮತ್ತು ನಗರ ಜನರಿಗೆ ಪ್ರಾಥಮಿಕ ಆರೈಕೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮಗ್ರವಾಗಿ ಒದಗಿಸಲು ಉನ್ನತೀಕರಿಸಲಾಗಿದೆ ಎಂದರು.