ಪ್ರಧಾನಿ ನರೇಂದ್ರ ಮೋದಿ ಅವರ ಮೇಲಿನ ಪ್ರೀತಿಯನ್ನು ಪ್ರದರ್ಶಿಸಲು, ಲಕ್ನೋದ ಚಾರ್ಟರ್ಡ್ ಅಕೌಂಟೆಂಟ್ ಒಬ್ಬರು ವಿಶೇಷ ಕಾರ್ಯ ಮಾಡಿದ್ದಾರೆ.
ಪ್ರಧಾನಿ ಮೋದಿ ಅವರಿಗೆ ನೀಡಿದ ಸ್ಮರಣಿಕೆಗಳನ್ನು ಇ- ಹರಾಜಿನಲ್ಲಿ ಖರೀದಿಸಿ ಅದರಿಂದ ತಮ್ಮ ಮನೆಯನ್ನು ಅಲಂಕರಿಸಿದ್ದಾರೆ. ಕಳೆದ ವರ್ಷ, ಪ್ರಧಾನಿಯವರ ಜನ್ಮದಿನದ ಸಂದರ್ಭದಲ್ಲಿ ಸೆಪ್ಟೆಂಬರ್ 14 ರಿಂದ ಅಕ್ಟೋಬರ್ 2 ರವರೆಗೆ ನಡೆದ ಪಿಎಂ ಮೆಮೆಂಟೊ ಇ-ಹರಾಜಿನಲ್ಲಿ, ಆಶಿಶ್ ವರ್ಮಾ ಅವರು ಪ್ರಧಾನ ಮಂತ್ರಿ ಸ್ವೀಕರಿಸಿದ 13 ಸ್ಮರಣಿಕೆಗಳನ್ನು ಖರೀದಿಸಿದ್ದರು.
ವರ್ಮಾ ಅವರು ತಮ್ಮ ಮನೆಯನ್ನು ಪಿಎಂ ಮೋದಿಯವರ ಸ್ಮಾರಕಗಳಿಂದ ಅಲಂಕರಿಸಿದ್ದಾರೆ ಮಾತ್ರವಲ್ಲದೆ ಅವರ ಮನೆಯಲ್ಲಿ ಪ್ರಧಾನಿಗೆ ಮೀಸಲಾಗಿರುವ ಸಣ್ಣ ವಸ್ತುಸಂಗ್ರಹಾಲಯವನ್ನು ನಿರ್ಮಿಸಲು ಬಯಸಿದ್ದಾರೆ.
ವರ್ಮಾ ಅವರು ಸ್ಮರಣಿಕೆಗಳಿಗಾಗಿ ಸುಮಾರು ಎರಡು ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ್ದಾರೆ. ಆಶಿಶ್ ವರ್ಮಾ ಖರೀದಿಸಿದ ಸ್ಮರಣಿಕೆಗಳಲ್ಲಿ ಮೂರು ಅಂಗವಸ್ತ್ರಗಳು, ಶ್ರೀರಾಮ ಮತ್ತು ವಿಷ್ಣುವಿನ ವಿಗ್ರಹಗಳು, ಶ್ರೀ ಪದ್ಮನಾಭ ಸ್ವಾಮಿಯ ಸ್ಮರಣಿಕೆ, ಪೆನ್ ಸ್ಟ್ಯಾಂಡ್, ಎರಡು ಶಾಲುಗಳು, ಲಕ್ಷ್ಮಿ ಮತ್ತು ಕಾಳಿಯ ವಿಗ್ರಹಗಳು ಸೇರಿವೆ.
ಈ ಎಲ್ಲಾ ಸ್ಮರಣಿಕೆಗಳಿಂದ ನಾನು ಸಾಕಷ್ಟು ಸ್ಫೂರ್ತಿ ಪಡೆಯುತ್ತೇನೆ. ನನ್ನ ಮನೆಯನ್ನು ಪ್ರಧಾನಿಯವರ ಸ್ಮರಣಿಕೆಗಳಿಂದ ಅಲಂಕರಿಸುವುದು ಮಾತ್ರವಲ್ಲ, ನಾನು ಹೆಚ್ಚಿನ ಸ್ಮರಣಿಕೆ ಖರೀದಿ ಮಾಡಿ ಪ್ರಧಾನ ಮಂತ್ರಿಯವರ ವಸ್ತುಸಂಗ್ರಹಾಲಯವನ್ನು ನಿರ್ಮಿಸುತ್ತೇನೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಈ ವರ್ಷ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಉಡುಗೊರೆಗಳು ಮತ್ತು ಸ್ಮರಣಿಕೆಗಳ ಇ-ಹರಾಜು ಅವರ ಜನ್ಮದಿನವಾದ ಸೆಪ್ಟೆಂಬರ್ 17ರಂದು ಪ್ರಾರಂಭವಾಗಲಿದೆ.
ಪ್ರಧಾನಿಗೆ ನೀಡಲಾದ 1200 ಉಡುಗೊರೆಗಳು ಮತ್ತು ಸ್ಮರಣಿಕೆಗಳನ್ನು ಹರಾಜು ಮಾಡಲಾಗುತ್ತದೆ. ಈ 1,200 ಉಡುಗೊರೆಗಳಲ್ಲಿ, ಅಯೋಧ್ಯೆಯ ಶ್ರೀರಾಮ ಮಂದಿರ ಮತ್ತು ವಾರಣಾಸಿಯ ಕಾಶಿ-ವಿಶ್ವನಾಥ ದೇವಾಲಯದ ಪ್ರತಿಕೃತಿಗಳು ಮತ್ತು ಮಾದರಿಗಳು ಆಕರ್ಷಣೆಯ ಕೇಂದ್ರವಾಗಿದೆ.