ವಿಧಾನಸಭಾ ಚುನಾವಣಾ ನಿಮಿತ್ತ ಉತ್ತರ ಪ್ರದೇಶದಲ್ಲಿ ಸರ್ಕಾರದಿಂದ ಬಡವರಿಗೆ ವಿತರಿಸಲಾಗುವ ಉಪ್ಪು, ಎಣ್ಣೆ ಮತ್ತು ಬೇಳೆಯ ಪ್ಯಾಕೆಟ್‌ಗಳ ಮೇಲೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಚಿತ್ರಗಳು ಕಂಡು ಬಂದಿದ್ದು, ಚರ್ಚೆಗೆ ಗ್ರಾಸವಾಗಿವೆ.
ರಾಜ್ಯ ಸರ್ಕಾರದ ಉಚಿತ ಪಡಿತರ ವಿತರಣೆ ಯೋಜನೆಯಡಿ ವಿತರಿಸಲಾಗುವ ಈ ಪ್ಯಾಕೆಟ್‌ಗಳ ಮೇಲೆ ಇವರಿಬ್ಬರ ಚಿತ್ರಗಳೊಂದಿಗೆ, “ಪ್ರಾಮಾಣಿಕ ಆಲೋಚನೆ, ಕೆಲಸ,” ಎಂದು ಘೋಷವಾಕ್ಯ ಬರೆಯಲಾಗಿದ್ದು, ಚುನಾವಣಾ ಪ್ರಚಾರಕ್ಕೆ ಬಿಜೆಪಿ ಇದನ್ನು ಬಳಸುತ್ತಿದೆ ಎನ್ನಲಾಗಿದೆ.
ಹೆಲಿಕಾಪ್ಟರ್ ದುರಂತದ ಅಂತಿಮ ಕ್ಷಣಗಳ ಸೆರೆಹಿಡಿದ ಮೊಬೈಲ್ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ
ಪ್ರಧಾನ ಮಂತ್ರಿ ಬಡವರ ಅನ್ನ ಕಲ್ಯಾಣ ಯೋಜನೆಯನ್ನು ಇನ್ನೂ ನಾಲ್ಕು ತಿಂಗಳ ಮಟ್ಟಿಗೆ ವಿಸ್ತರಿಸುವುದಾಗಿ 20 ದಿನಗಳ ಹಿಂದಷ್ಟೇ ಕೇಂದ್ರ ಸರ್ಕಾರ ತಿಳಿಸಿತ್ತು. ಕೋವಿಡ್‌ನ ಸಂಕಷ್ಟದ ಸಂದರ್ಭದಲ್ಲಿ ಆರಂಭಗೊಂಡ ಈ ಯೋಜನೆಯಲ್ಲಿ, ರಾಷ್ಟ್ರೀಯ ಆಹಾರ ಭದ್ರತೆ ಯೋಜನೆಯಲ್ಲಿ ಬರುವ ಪ್ರತಿಯೊಬ್ಬ ಫಲಾನುಭವಿಗೂ ಪ್ರತಿ ತಿಂಗಳು ಐದು ಕೆಜಿಯಷ್ಟು ಹೆಚ್ಚುವರಿ ರೇಷನ್ ನೀಡಲಾಗುತ್ತಿದೆ.
ಈ ಪ್ಯಾಕೆಟ್ ಗಳನ್ನು ರಾಜ್ಯದ 80,000ಕ್ಕೂ ಹೆಚ್ಚು ರೇಷನ್ ಅಂಗಡಿಗಳಲ್ಲಿ ವಿತರಿಸಲಾಗುತ್ತಿದೆ. 15 ಕೋಟಿಯಷ್ಟು ಫಲಾನುಭವಿಗಳು ಈ ಪ್ಯಾಕೆಟ್‌ಗಳನ್ನು ಪಡೆಯುತ್ತಿದ್ದಾರೆ ಎಂದು ಖುದ್ದು ರಾಜ್ಯ ಸರ್ಕಾರದ ಅಂಕಿ ಅಂಶಗಳು ತಿಳಿಸುತ್ತಿವೆ.
ಕೇಂದ್ರ ಹಾಗೂ ರಾಜ್ಯಗಳೆರಡರಲ್ಲೂ ಒಂದೇ ಪಕ್ಷ ಅಧಿಕಾರದಲ್ಲಿರುವುದನ್ನು ’ಡಬಲ್ ಇಂಜಿನ್ ಸರ್ಕಾರ’ ಎಂದು ಕರೆಯುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಕಾರ್ಯಾಲಯ, ಈ ಯೋಜನೆಗೆ ’ಡಬಲ್ ರೇಷನ್ ಯೋಜನೆ’ ಎಂದು ಕರೆಯುತ್ತಿದೆ.