ಮೈಸೂರು: ಮಾನವೀಯತೆಗಾಗಿ ಯೋಗ ಈ ವರ್ಷದ ಘೋಷವಾಕ್ಯವಾಗಿದೆ. ಇಂದು ಯೋಗ ಜಾಗತಿಕವಾಗಿ ತನ್ನದೇ ಆದ ಮಹತ್ವದ ಸ್ಥಾನ ಪಡೆದುಕೊಂಡಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಮೈಸೂರಿನ ಅರಮನೆ ಮೈದಾನದಲ್ಲಿ ನಡೆದ ವಿಶ್ವ ಯೋಗ ದಿನಾಚರಣೆಯ ಪ್ರಧಾನ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಮೋದಿ, ಎಲ್ಲರಿಗೂ ವಿಶ್ವ ಯೋಗ ದಿನಾಚರಣೆಯ ಶುಭಾಶಯಗಳು. ಇಂದು ವಿಶ್ವದ ಮೂಲೆ ಮೂಲೆಗಳಲ್ಲಿಯೂ ಯೋಗ ದಿನವನ್ನು ಆಚರಿಸಲಾಗುತ್ತಿದೆ. ಕೊರೋನಾ ಸಮಯದಲ್ಲಿಯೂ ಯೋಗದ ಉತ್ಸಾಹ ಕಡಿಮೆಯಾಗಲಿಲ್ಲ ಎಂದರು.
ಯೋಗ ಶಾಂತಿಯನ್ನು ಮೂಡಿಸುತ್ತದೆ ಎಂದು ನಮ್ಮ ಋಷಿಮುನಿಗಳು ತೋರಿಸಿಕೊಟ್ಟಿದ್ದಾರೆ. ಕರ್ನಾಟಕದ ಸಾಂಸ್ಕೃತಿಕ ರಾಜಧಾನಿಯಾಗಿರುವ ಮೈಸೂರು ಆಧ್ಯಾತ್ಮ, ಯೋಗದ ಭೂಮಿಯಾಗಿದೆ. ಈ ಮೊದಲು ಯೋಗವನ್ನು ಕೆಲವು ಮನೆಗಳು ಆಧ್ಯಾತ್ಮ ಕೇಂದ್ರಗಳಲ್ಲಿ ಮಾತ್ರ ಆಚರಿಸಲಾಗುತ್ತಿತ್ತು. ಇಂದು ವಿಶ್ವದೆಲ್ಲೆಡೆ ಜನ ಯೋಗ ಮಾಡುತ್ತಿದ್ದಾರೆ ಎಂದು ಹೇಳಿದರು.
ಇಂದು ಜೀವನಶೈಲಿಯಲ್ಲಿ ಬದಲಾವಣೆಯಾಗಿದೆ. ಸ್ವಯಂ ಜಾಗೃತಿಯಿಂದ ಯೋಗದಿಂದ ಜೀವನಶೈಲಿ ಸುಧಾರಿಸಿಕೊಳ್ಳಬಹುದು. ಯೋಗದ ಸಂದೇಶ ಸಾರಲು ಮುಂದಾದ ವಿಶ್ವಸಂಸ್ಥೆಗೆ ಧನ್ಯವಾದ ಹೇಳಿದ ಅವರು, ಯೋಗದಿನದ ವಿಶ್ವಾಸವೇ ನಮ್ಮ ಬದುಕಿಗೂ ಪ್ರೇರಣೆಯಾಗಿದೆ. ನಮ್ಮೆಲ್ಲರ ಆತ್ಮಸಾಕ್ಷಿಯನ್ನು ಯೋಗ ಎಚ್ಚರಿಸುತ್ತದೆ. ಜನತೆ, ದೇಶದ ಸಂಪರ್ಕಕ್ಕೆ ಯೋಗದಿಂದ ಅನುಕೂಲವಾಗಿದೆ. ಸಮಾಜದಲ್ಲಿ ಶಾಂತಿ, ವಿಶ್ವಶಾಂತಿಗಾಗಿ ಯೋಗ ಬೇಕಿದೆ. ಗಾರ್ಡಿಯನ್ ರಿಂಗ್ ಆಫ್ ಯೋಗ ಈ ವರ್ಷದ ಅಂತರಾಷ್ಟ್ರೀಯ ಯೋಗ ದಿನದ ಪ್ರಮುಖ ಆಕರ್ಷಣೆಯಾಗಿದೆ. ವಿಶ್ವದಾದ್ಯಂತ ನಡೆಯುವ ಯೋಗ ದಿನಾಚರಣೆಯ ಕಾರ್ಯಕ್ರಮಗಳನ್ನು ಜೋಡಿಸಲಾಗುತ್ತದೆ ಎಂದರು.