ಐಸಿಸಿ ಏಕದಿನ ವಿಶ್ವಕಪ್ ಫೈನಲ್ ಹಂತಕ್ಕೆ ಬಂದು ನಿಂತಿದೆ. ಇದೇ ನವೆಂಬರ್ ೧೯ರಂದು ಭಾರತ ಹಾಗೂ ಆಸ್ಟ್ರೇಲಿಯಾ ಮಧ್ಯೆ ಫೈನಲ್ ಪಂದ್ಯ ನಡೆಯಲಿದೆ. ವಿಶ್ವಕಪ್ ಎತ್ತಿ ಹಿಡಿಯುವ ತವಕದಲ್ಲಿ ಭಾರತ ತಂಡವಿದೆ. ಇಡೀ ವಿಶ್ವವೇ ವಿಶ್ವಕಪ್ ವೀಕ್ಷಿಸಲು ತುದಿಗಾಲಿನಲ್ಲಿ ನಿಂತಿದೆ.
ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡವನ್ನು ಹುರಿದುಂಬಿಸಲು ಅನೇಕ ಸೆಲೆಬ್ರಿಟಿಗಳು ಮೈದಾನಕ್ಕೆ ಬಂದಿದ್ದರು. ಫೈನಲ್ ಪಂದ್ಯಕ್ಕೂ ಅನೇಕ ಸೆಲೆಬ್ರಿಟಿಗಳು ಆಗಮಿಸಲಿದ್ದಾರೆ. ಅದ್ರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದ್ದಾರೆ.
ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವಕಪ್ 2023 ರ ಫೈನಲ್ ವೀಕ್ಷಿಸಲು ಪ್ರಧಾನಿ ಮೋದಿ ಹೋಗಲಿದ್ದಾರೆ. ಪ್ರಧಾನಿ ಮೋದಿ ಜೊತೆಗೆ ಆಸ್ಟ್ರೇಲಿಯಾದ ಉಪ ಪ್ರಧಾನಿ ರಿಚರ್ಡ್ ಮಾರ್ಲ್ಸ್ ಕೂಡ ಉಪಸ್ಥಿತರಿರಲಿದ್ದಾರೆ.
ಪ್ರಧಾನಿ ಕಾರ್ಯಾಲಯವು, ಪಂದ್ಯ ವೀಕ್ಷಿಸಲು ಪ್ರಧಾನಿ ಮೋದಿಯವರಿಗೆ ನೀಡಿದ್ದ ಆಹ್ವಾನವನ್ನು ಸ್ವೀಕರಿಸಿದೆ. ಪ್ರಧಾನಿ ಮೋದಿ ಜೊತೆ ಗೃಹ ಸಚಿವ ಅಮಿತ್ ಶಾ ಕೂಡ ಉಪಸ್ಥಿತರಿರಲಿದ್ದಾರೆ.
ಮೈದಾನದಲ್ಲಿ ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗುತ್ತಿದೆ. ನವೆಂಬರ್ 19 ರಂದು ಮಧ್ಯಾಹ್ನದ ನಂತರ ಪ್ರಧಾನಿ ಅಹಮದಾಬಾದ್ ತಲುಪಲಿದ್ದಾರೆ. ಪಂದ್ಯ ವೀಕ್ಷಿಸಿದ ನಂತರ ಪ್ರಧಾನಿ ರಾತ್ರಿ ಗಾಂಧಿನಗರ ರಾಜಭವನದಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ. ಇಲ್ಲಿಂದ ಮರುದಿನ ನವೆಂಬರ್ 20ರಂದು ಬೆಳಗ್ಗೆ ಪ್ರಧಾನಿ ರಾಜಸ್ಥಾನದ ಚುನಾವಣಾ ಪ್ರವಾಸಕ್ಕೆ ತೆರಳಲಿದ್ದಾರೆ.
ಈ ವಿಶ್ವಕಪ್ ಫೈನಲ್ ಇನ್ನೊಂದು ವಿಷ್ಯಕ್ಕೆ ಗಮನ ಸೆಳೆದಿದೆ. 20 ವರ್ಷಗಳ ಬಳಿಕ ಮತ್ತೊಮ್ಮೆ ಏಕದಿನ ವಿಶ್ವಕಪ್‌ನ ಫೈನಲ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡ ಮುಖಾಮುಖಿಯಾಗಲಿದೆ. ಇದಕ್ಕೂ ಮುನ್ನ 2003ರ ವಿಶ್ವಕಪ್‌ನ ಫೈನಲ್ ಪಂದ್ಯ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದಿತ್ತು.