ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಇಂದು ಬೆಂಗಳೂರಿಗೆ ಆಗಮಿಸಲಿದ್ದಾರೆ. ಹೆಚ್ಎಎಲ್ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಲಿದ್ದಾರೆ.
ಚಂದ್ರಯಾನ 3 ಯಶಸ್ವಿ ಹಿನ್ನೆಲೆಯಲ್ಲಿ ಐತಿಹಾಸಿಕ ಸಾಧನೆಗೆ ಕಾರಣವಾದ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಲು ಮೋದಿ ಬೆಂಗಳೂರಿಗೆ ಆಗಮಿಸಿದ್ದರು. ಮೂರು ತಿಂಗಳ ಬಳಿಕ ಮತ್ತೆ ಕರ್ನಾಟಕಕ್ಕೆ ಭೇಟಿ ನೀಡುತ್ತಿದ್ದಾರೆ.
ಶನಿವಾರ ಬೆಳಗ್ಗೆ 9:15ಕ್ಕೆ ನವದೆಹಲಿಯಿಂದ ವಿಶೇಷ ವಿಮಾನದಲ್ಲಿ ಪ್ರಯಾಣ ಬೆಳೆಸಲಿರುವ ಪ್ರಧಾನಿ ಮೋದಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್(HAL) ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಸಂಸ್ಥೆ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸಿ ತೇಜಸ್ ಜೆಟ್ ಉತ್ಪಾದನಾ ಸೌಲಭ್ಯ ಪರಿಶೀಲಿಸಲಿದ್ದಾರೆ. ಬಳಿಕ ಚುನಾವಣಾ ಪ್ರಚಾರಕ್ಕೆ ತೆಲಂಗಾಣಕ್ಕೆ ಪ್ರಯಾಣ ಬೆಳೆಸಲಿದ್ದಾರೆ.
ರಕ್ಷಣಾ ವಸ್ತುಗಳನ್ನು ಸ್ವದೇಶದಲ್ಲೆ ಉತ್ಪಾದಿಸುವ ಗುರಿಯೊಂದಿಗೆ ತೇಜಸ್ ಲಘು ಯುದ್ಧ ವಿಮಾನ ಉತ್ಪಾದನೆ ಕೈಗೊಳ್ಳಲಾಗಿದೆ. ಯುದ್ಧ ವಿಮಾನ ಖರೀದಿಸಲು ಅನೇಕ ದೇಶಗಳು ಆಸಕ್ತಿ ತೋರಿಸಿವೆ. ಅಮೆರಿಕದ ರಕ್ಷಣಾ ಸಂಸ್ಥೆ ಜೆಎ ಸ್ಪೇಸ್ ಎಂಕೆ 11 ತೇಜಸ್ ಗೆ ಜಂಟಿಯಾಗಿ ಎಂಜಿನ್ ಗಳನ್ನು ಉತ್ಪಾದಿಸಲು ಹೆಚ್ಎಎಲ್ ಜೊತೆಗೆ ಒಪ್ಪಂದ ಮಾಡಿಕೊಂಡಿದೆ.