ನವದೆಹಲಿ: ರಾಜಕಾರಣಿಗಳು ತಮ್ಮ ಸರದಿಗೆ ಮೊದಲು ಲಸಿಕೆಯನ್ನು ಪಡೆಯಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಸಭೆಯಲ್ಲಿ ಮಾತನಾಡಿದ ಅವರು, ರಾಜಕಾರಣಿಗಳು ತಮ್ಮ ಸರದಿ ಬಂದಾಗ ಕೊರೋನಾ ಲಸಿಕೆ ಪಡೆಯಬೇಕು. ಧಾರ್ಮಿಕ-ಸಾಮಾಜಿಕ ಸಂಘಟನೆಗಳನ್ನು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ಚುನಾವಣೆ ಮಾದರಿಯಲ್ಲಿ ಲಸಿಕೆ ಅಭಿಯಾನ ನಡೆಸಲಾಗುವುದು. ಬೂತ್ ಮಟ್ಟದ ಕಾರ್ಯತಂತ್ರವನ್ನು ಅನುಸರಿಸಿದಂತೆ ಲಸಿಕೆ ನೀಡಲು ಇದೇ ತಂತ್ರ ಅನುಸರಿಸಲಾಗುವುದು ಎಂದು ತಿಳಿಸಿದ್ದಾರೆ.
ಸಾರ್ವತ್ರಿಕ ಲಸಿಕೆ ನೀಡಲು ನಮ್ಮ ಬಳಿ ವ್ಯವಸ್ಥೆಯಿದೆ. ವಿಶ್ವದ ಯಾವುದೇ ಲಸಿಕೆಗಳಿಗಿಂತ ಪರಿಣಾಮಕಾರಿಯಾದ ಲಸಿಕೆಗಳು ನಮ್ಮ ಬಳಿ ಇವೆ. ಲಸಿಕೆ ಅಭಿಯಾನ ಬೇರೆ ದೇಶಗಳಿಗೆ ಮಾದರಿಯಾಗಿರಬೇಕು. ಲಸಿಕೆ ವಿಚಾರದಲ್ಲಿ ಅಪಪ್ರಚಾರಗಳಿಗೆ ಕಿವಿಗೊಡಬೇಡಿ ಎಂದು ದೇಶದ ಜನತೆಗೆ ಮೋದಿ ಮನವಿ ಮಾಡಿದ್ದಾರೆ.