ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದಿನಿಂದ 5 ದಿನಗಳ ಕಾಲ ಅಮೆರಿಕ ಪ್ರವಾಸ ಕೈಗೊಂಡಿದ್ದಾರೆ. ಸುಮಾರು ಒಂದೂವರೆ ವರ್ಷದ ನಂತರ ಮೊದಲ ವಿದೇಶ ಪ್ರವಾಸ ಕೈಗೊಂಡಿದ್ದಾರೆ.
ಸೆಪ್ಟೆಂಬರ್ 26 ರವರೆಗೆ ಮೋದಿ ಅಮೆರಿಕದಲ್ಲಿ ಇರಲಿದ್ದಾರೆ. ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ಅವರು ಭಾಗಿಯಾಗಲಿದ್ದಾರೆ. ಕ್ವಾಡ್ ಒಕ್ಕೂಟದ ಸಭೆಯಲ್ಲಿ ಭಾಗಿಯಾಗಲಿರುವ ಅವರು, ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆಯಲ್ಲಿಯೂ ಭಾಗವಹಿಸಲಿದ್ದಾರೆ.
ಬೈಡನ್ ಅವರು ಅಮೆರಿಕ ಅಧ್ಯಕ್ಷರಾದ ನಂತರ ಮೋದಿ ಮೊದಲ ಅಮೆರಿಕ ಭೇಟಿ ಇದಾಗಿದೆ. ಇನ್ನು ತಮ್ಮ ಭೇಟಿಯ ವೇಳೆ ಪ್ರಧಾನಿ ಮೋದಿ ಸೆಪ್ಟೆಂಬರ್ 24 ರಂದು ಕೊರೋನಾ ಜಾಗತಿಕ ಶೃಂಗ ಮತ್ತು ಕ್ವಾಡ್ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಅವರೊಂದಿಗೆ ವಿದೇಶಾಂಗ ಸಚಿವ ಜೈಶಂಕರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ತೆರಳಲಿದ್ದಾರೆ. ಭೇಟಿಯ ವೇಳೆ ಆಫ್ಘಾನಿಸ್ತಾನದಲ್ಲಿನ ಬೆಳವಣಿಗೆಗಳ ಕುರಿತು ಬೈಡೆನ್ ಜೊತೆಗೆ ಮೋದಿ ಚರ್ಚೆ ನಡೆಸಲಿದ್ದಾರೆ.